ಮೈಸೂರು:ಮೈಮುಲ್ ನೇಮಕಾತಿಯ ಅವ್ಯವಹಾರದಲ್ಲಿ ಸಿಎಂ ಬಿಎಸ್ವೈ ಅವರ ಸಂಬಂಧಿಕರ ಕೈವಾಡವಿದೆ ಎಂದು ಶಾಸಕ ಸಾ.ರಾ. ಮಹೇಶ್ ಆರೋಪಿಸಿದ್ದು, ಈ ಕುರಿತ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಡಿದ ಅವರು, ಮೈಸೂರು ಮೆಗಾ ಡೈರಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಒಂದೊಂದು ಹುದ್ದೆಗೂ 10ರಿಂದ 40 ಲಕ್ಷ ವರೆಗೆ ಲಂಚ ಪಡೆಯಲಾಗಿದೆ. ಈ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಸಂಬಂಧಿಯಾದ ನಾಮ ನಿರ್ದೇಶಿತ ಸದಸ್ಯ ಅಶೋಕ್ ಅವರ ಹೆಸರೂ ಇದೆ ಎಂದು ಆರೋಪಿಸಿದ್ದಾರೆ.
ಮೈಮುಲ್ ನೇಮಕಾತಿಯ ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿಯಲ್ಲಿ ಹಾಲಿ ಅಧ್ಯಕ್ಷರಾದ ಸಿದ್ದೇಗೌಡ ಅವರ ತಂಗಿಯ ಮಗ ಶಿವಣ್ಣ ಹಾಗೂ ಅಕ್ಕನ ಮಗ ಮನೋಜ್ ಹೆಸರಿದೆ. ಒಟ್ಟು 18 ಸಾವಿರ ಜನರು ಅರ್ಜಿ ಸಲ್ಲಿಸಿದ್ದು ಅದರಲ್ಲಿ197 ಜನರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇದರಲ್ಲಿ ಅವ್ಯವಹಾರ ನಡೆದರೂ ನೇಮಕಾತಿಗೆ ಸಂದರ್ಶನ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು , ಒಂದು ವೇಳೆ ಸಂದರ್ಶನ ಕರೆದರೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನೇತೃತ್ವದಲ್ಲಿ ಇದೇ ತಿಂಗಳ 19ರಂದು ಮೆಗಾ ಡೈರಿಯ ಮುಂದೆ ಬಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಡಿಯೋ ಬಿಡುಗಡೆ ಮಾಡಿದ ಶಾಸಕ ಸಾ.ರಾ. ಮಹೇಶ್ ಈ ನೇಮಕಾತಿ ಸಂಪೂರ್ಣವಾಗಿ ಅವ್ಯವಹಾರದಿಂದ ಕೂಡಿದ್ದು ಮ್ಯಾಚ್ ಫಿಕ್ಸಿಂಗ್ ಆಗಿದೆ, ಕಾನೂನು ಬಾಹಿರವಾಗಿ ನಡೆದಿದೆ. ಈಗಾಗಲೇ ಅಡ್ವಾನ್ಸ್ ಕೊಟ್ಟಿವವರ ನೇಮಕಾತಿಯಾಗುತ್ತಿದೆ ಎಂದ ಅವರು, ಪೂರ್ತಿ ಹಣ ನೀಡಬೇಡಿ ಎಂದು ಮನವಿ ಮಾಡಿದರು.
ಜೊತೆಗೆ ಸಂದರ್ಶನದ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಹಣ ಪಡೆದ ಮಾತುಕತೆಯ 3 ಆಡಿಯೋವನ್ನು ಬಿಡುಗಡೆ ಮಾಡಿದ ಅವರು, ಇನ್ನು ದೊಡ್ಡ ವ್ಯಕ್ತಿಗಳ ನಡುವೆ ನಡೆದ ಡೀಲ್ನ ಆಡಿಯೋವನ್ನು ಮುಂದಿನ ಹಂತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ತಕ್ಷಣ ಈ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಈ ನೇಮಕಾತಿಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.