ಮೈಸೂರು:ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ವ್ಯಕ್ತಿಗಳಿಂದ ಮೈಸೂರಿನಲ್ಲಿ ಇಲ್ಲಿಯವರೆಗೆ ದಾಖಲಾದ ಪ್ರಕರಣ ಹಾಗೂ ದಂಡದ ಮೊತ್ತ ಎಷ್ಟು ಗೊತ್ತಾ? ಈ ಬಗ್ಗೆ ಸ್ವತಃ ಡಿಸಿಪಿ ಗೀತಾ ಪ್ರಸನ್ನ ಈಟಿವಿ ಭಾರತಕ್ಕೆ ನೀಡಿದ ವಿವರ ಇಲ್ಲಿದೆ.
ಕೋವಿಡ್ ಶುರುವಾಗಿನಿಂದಲೂ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಹಾಗಾಗಿ, ಕಾನೂನು ಮೀರಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡು ದಂಡವನ್ನು ವಸೂಲಿ ಮಾಡಲಾಗಿದೆ. ಇದಷ್ಟೇ ಅಲ್ಲ, ಮಾಸ್ಕ್ ಹಾಗೂ ಕಾನೂನಿನ ಬಗ್ಗೆ ಜನರಲ್ಲಿ ಅರಿವು ಸಹ ಮೂಡಿಸಲಾಗಿದೆ ಎಂದಿದ್ದಾರೆ.
ಇಲ್ಲಿಯವರೆಗೂ ನಮ್ಮಲ್ಲಿ 19,447 ಪ್ರಕರಣ ದಾಖಲಾಗಿದ್ದು ಅದರಲ್ಲಿ 44 ಲಕ್ಷದ 1 ಸಾವಿರದ 450 ರೂ. ದಂಡ ವಸೂಲಿ ಮಾಡಿದ್ದೇವೆ. ಈ ರೀತಿಯಾಗಿ ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಮಾಸ್ಕ್ಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲು ಮಾಡುತ್ತಿರುವುದಾಗಿ ತಿಳಿಸಿದರು.
ಪೊಲೀಸ್ ಇಲಾಖೆಯಿಂದ ಹಾಕುತ್ತಿದ್ದ ಡ್ರಿಂಕ್ಸ್ ಕೇಸ್ಗಳನ್ನು ಸರ್ಕಾರದ ನಿರ್ದೇಶನದಂತೆ ನಿಲ್ಲಿಸಲಾಗಿದೆ. ಆದರೆ, ಇತ್ತೀಚೆಗೆ ನಗರದಲ್ಲಿ ರಾತ್ರಿ ವೇಳೆ ಡ್ರಿಂಕ್ಸ್ ಪಾರ್ಟಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿವೆ. ಮಾಹಿತಿ ಕೊರತೆ ಹಾಗೂ ಸರ್ಕಾರದ ನಿರ್ದೇಶನದ ಹಿನ್ನೆಲೆ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾಹಿತಿ ಬಂದಿದೆ.
ಡ್ರಿಂಕ್ ಅಂಡ್ ಡ್ರೈವ್ ಕೇಸ್ಗಳು ಹೆಚ್ಚಾಗುತ್ತಿವೆ. ಇದರಿಂದ ಸಾವು-ನೋವುಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಹಾಗಾಗಿ, ಪೊಲೀಸ್ ಇಲಾಖೆಯಿಂದ ಇದರ ಬಗ್ಗೆ ಚರ್ಚೆ ನಡೆಸಲಾಗಿದ್ದು ಸದ್ಯದಲ್ಲೇ ಈ ಡ್ರಿಂಕ್ಸ್ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.