ಮೈಸೂರು:ಸುಲಭವಾಗಿ ಹಣ ಗಳಿಸಲು ಹೋದರೆ ಅಪಾಯ ಗ್ಯಾರಂಟಿ ಎಂಬ ಮಾತಿಗೆ ಮೈಸೂರಿನಲ್ಲೊಂದು ಘಟನೆ ನಡೆದಿದೆ. ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎಂಬ ಮೆಸೇಜ್ಗೆ ಮರುಳಾಗಿ, ಮೈಸೂರಿನ ಇಬ್ಬರು ವ್ಯಕ್ತಿಗಳು 87 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೀಗೆ ಬಿಟ್ ಕಾಯಿನ್ಗೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದು, ಹಣ ಕಳೆದುಕೊಂಡಿದ್ದಾರೆ. ಮೈಸೂರಿನ ಮೇಟಗಳ್ಳಿ ನಿವಾಸಿ ವಿಜಯಲಕ್ಷ್ಮಿ 52 ಲಕ್ಷ ಹಾಗೂ ಮಹಮ್ಮದ್ ಜಾವೇದ್ 35 ಲಕ್ಷ ದುಡ್ಡು ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ. ಇವರು ಬಿಟ್ ಕಾಯಿನ್ ಮೂಲಕ ಸುಲಭವಾಗಿ ಹಣಗಳಿಸಬಹುದು ಎನ್ನುವ ಜಾಹೀರಾತಿಗೆ ಮರುಳಾಗಿದ್ದಾರೆ. ಇವರಿಬ್ಬರು ಸಹ ಬ್ಯಾಂಕ್ನಲ್ಲಿ ಸಾಲ ಮಾಡಿ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದ್ದಾರೆ.
ವಂಚನೆಗೆ ಒಳಗಾಗಿದ್ದು ಹೇಗೆ?:ಟೆಲಿಗ್ರಾಂ ಆ್ಯಪ್ನಲ್ಲಿ ಖದೀಮರು ಗ್ರೂಪ್ ರಚನೆ ಮಾಡಿದ್ದರು. ಇದರಿಂದ ಬಿಟ್ ಕಾಯಿನ್ಗೆ ಹಣ ಹಾಕಿದರೆ ಹೆಚ್ಚಿನ ಹಣ ಸುಲಭವಾಗಿ ಗಳಿಸಬಹುದು ಎಂಬ ಜಾಹೀರಾತಿನ ಮೂಲಕ ಗಮನಸೆಳೆದಿದ್ದರು. ನಕಲಿ ಸ್ಕ್ರೀನ್ ಶಾಟ್ಗಳನ್ನು ಗ್ರೂಪ್ನ ಸದಸ್ಯರಿಗೆ ಕಳಿಸಿದ್ದರು. ಟೆಲಿಗ್ರಾಂ ಗ್ರೂಪ್ ಸದಸ್ಯರನ್ನು ಮರಳು ಮಾಡಿದ್ದರು. ತಾವು ಸಹ ಹೂಡಿಕೆ ಮಾಡುವಂತೆ ಚಾಟ್ ಮಾಡಿದ್ದರು. ಹೆಚ್ಚು ಲಾಭದ ಆಸೆ ತೋರಿಸಿ, ತಾವು ಸಹ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ ಖದೀಮರು, ದೇಶದ ವಿವಿಧ ರಾಜ್ಯಗಳಲ್ಲಿ ಇರುವ 51 ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದರು.