ಮೈಸೂರು: ಕರ್ನಾಟಕದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೀವ್ ಬಬ್ಬರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ನಾವು ಈಗಾಗಲೇ ಕರ್ನಾಟಕದಲ್ಲಿ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದೇವೆ. ಅದರಲ್ಲಿ ಬಿಜೆಪಿ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವರದಿ ಬಂದಿದೆ. ಹಾಗಾಗಿ ಈ ಬಾರಿ ಕೂಡ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಏನೇ ಪ್ರಯತ್ನ ನಡೆಸಿದರೂ, ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಟವನ್ನು ನಡೆಸುತ್ತಿದೆ. ಆದರೆ ರಾಜ್ಯದ ಜನರು ಈ ಬಾರಿಯೂ ಕಾಂಗ್ರೆಸ್ ನಾಯಕರ ಅಧಿಕಾರಕ್ಕೆ ಬರುವ ಕನಸನ್ನು ನನಸು ಮಾಡುವುದಿಲ್ಲ. ಡಬಲ್ ಇಂಜಿನ್ ಬಿಜೆಪಿ ಸರ್ಕಾರ ದೇಶದಲ್ಲಿ, ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿದಿನ ಕೇವಲ 2 ಕಿ.ಮೀ ರಸ್ತೆ ಮಾತ್ರ ಅಭಿವೃದ್ಧಿ ಆಗುತ್ತಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿದಿನ 39 ಕಿ.ಮೀ ರಸ್ತೆಯನ್ನು ಅಭಿವೃದ್ಧಿಗೊಳಿಸುತ್ತಿದೆ ಎಂದು ಹೇಳಿದರು. ಬೆಂಗಳೂರು ಮೈಸೂರು ನಡುವೆ ದಶಪಥ ರಸ್ತೆಯನ್ನು ನಿರ್ಮಾಣ ಮಾಡಿ ಅದನ್ನು ಉದ್ಘಾಟಿಸಿ ಜನರ ಸೇವೆಗೆ ನೀಡಿದೆ. ಇದರಿಂದಾಗಿ ಮೈಸೂರು ಬೆಂಗಳೂರು ನಡುವಿನ ಪ್ರಯಾಣದ ಅವಧಿ ಇಳಿದಿದೆ. ಮೈಸೂರು ನಗರ ಅಭಿವೃದ್ಧಿಯಾಗುವುದಕ್ಕೆ ಎಲ್ಲ ಅವಕಾಶವನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.