ಮೈಸೂರು :ಕಟ್ಟು ಪದ್ದತಿಯಲ್ಲಿ ನೀರು ಹರಿಸುವುದನ್ನು ಬಿಟ್ಟು, ರೈತರ ಬೆಳೆಗಳಿಗೆ ಅಗತ್ಯವಾದ ನೀರನ್ನು ಹರಿಸಿ, ರೈತರ ಬೆಳೆಗಳನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಹಿತ ರಕ್ಷಣೆ ಮುಖ್ಯವಾಗಿದ್ದು, ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಬೇಕು. ಕೆಆರ್ಎಸ್ನಲ್ಲಿ 113 ಅಡಿ ನೀರು ಇತ್ತು. ಈಗ 102 ಅಡಿ ಇದೆ. ಮೊದಲು ನಮ್ಮ ರೈತರ ಭೂಮಿಗೆ ನೀರು ಹರಿಸಿ. ನಂತರ ಬೇರೆಯವರಿಗೆ ನೀರು ಹರಿಸಲು ಕ್ರಮ ವಹಿಸಿ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರಾದ ವೆಂಕಟೇಶ್ ಸಭೆಗೆ ಮಾಹಿತಿ ನೀಡಿ, ಮೈಸೂರು ಜಿಲ್ಲೆಗೆ ಕೆ ಆರ್ ಎಸ್, ಕಬಿನಿ, ಹಾರಂಗಿಯಿಂದ ನೀರನ್ನು ರೈತರಿಗೆ ನೀಡಲಾಗುತ್ತಿದೆ. ನೀರಾವರಿ ಸಲಹಾ ಸಮಿತಿಯಿಂದ ಕೆ ಆರ್ ಎಸ್, ಕಬಿನಿ, ಹಾರಂಗಿಯ ನೀರಿನ ಸಂಗ್ರಹದ ಸಾಮರ್ಥ್ಯದ ಮೇಲೆ ಕಟ್ಟು ಪದ್ದತಿಯಲ್ಲಿ/ಅರೆ ಬೇಸಾಯ ಪದ್ದತಿಯಲ್ಲಿ ನೀರು ಬಿಟ್ಟಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾತನಾಡಿದ ಮುಖ್ಯಮಂತ್ರಿಗಳು, ಆನ್ ಅಂಡ್ ಆಫ್‌ನಲ್ಲಿ ನೀರು ಬಿಡಲು ನೀರಾವರಿ ಸಲಹಾ ಸಮಿತಿ(ಐಸಿಸಿ)ಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ಸರಿಯಾದದ್ದಲ್ಲ. ಸಂಕಷ್ಟ ಸೂತ್ರ ಇದ್ದಾಗ ಮಾತ್ರ ಆನ್ ಅಂಡ್ ಆಫ್‌ನಲ್ಲಿ ನೀರು ಬಿಡಬೇಕು. ಈಗ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಕಮಿಟಿಯಲ್ಲಿ ಸಂಕಷ್ಟ ಸೂತ್ರದಂತೆ ಎಷ್ಟು ನೀರು ಬಿಡಬೇಕು ಎಂದು ನಿರ್ಧಾರ ಆಗುತ್ತದೆ. ಮೊದಲು ನಮ್ಮ ರೈತರು ಹಾಗೂ ಇಲ್ಲಿನ ಬೆಳೆಗಳ ರಕ್ಷಣೆಯ ಬಗ್ಗೆ ಗಮನಹರಿಸಿ ಎಂದು ಅವರು ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿ, ವಾರ್ಷಿಕ ವಾಡಿಕೆಯಂತೆ ಇಲ್ಲಿಯವರೆಗೆ 495.1 ಮೀ.ಮೀ ಮಳೆ ಆಗಬೇಕಿತ್ತು. ಆದರೆ 405.7 ಮೀ.ಮೀ ಮಳೆ ಆಗಿದೆ. ಶೇ.18 ರಷ್ಟು ಮಳೆ ಕೊರತೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ಮಳೆ ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ ಶೇ.58 ರಷ್ಟು ಬಿತ್ತನೆ ಆಗಿದೆ. ಕಳೆದ ವರ್ಷ 72 ರಷ್ಟು ಬಿತ್ತನೆ ಆಗಿತ್ತು. ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶದಲ್ಲಿ 3.98 ಲಕ್ಷ ಬಿತ್ತನೆಯ ಗುರಿ ಇಟ್ಟುಕೊಳ್ಳಲಾಗಿದ್ದು, 2.33 ಲಕ್ಷ ಎಕರೆ ಬಿತ್ತನೆಯಾಗಿದೆ. ಈ ವರ್ಷ ಮಳೆ ಕೊರತೆಯಿಂದ ಇಳುವರಿ ಕಡಿಮೆ ಬರುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿದ್ದು, ಬರಗಾಲ ಎಂದು ಘೋಷಣೆ ಮಾಡಬೇಕಿದೆ. ರೈತರು ತಮ್ಮ ಜಮೀನಿನಲ್ಲಿ ಇರುವ ಬೆಳೆಗಳನ್ನು ಕಾಪಾಡಿಕೊಳ್ಳಲು ಕೃಷಿ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ರೈತರೊಂದಿಗೆ ಅಧಿಕಾರಿಗಳು ನೇರ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೃಷಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಬೇಕು. ಬೆಳೆಗಳಿಗೆ ಯಾವ ಯಾವ ರೋಗಗಳು ಬಂದಿದೆ ಎಂಬುದನ್ನು ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿ, ರೋಗ ಹೋಗಲಾಡಿಸಲು ಯಾವ ಔಷಧಿ ಸಿಂಪಡಿಸಬೇಕು ಎಂಬ ಮಾಹಿತಿಯನ್ನು ಕಾಲ ಕಾಲಕ್ಕೆ ನೀಡಬೇಕು ಎಂದರು.
ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ಕೊರತೆ ಆಗಬಾರದು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಮಾಹಿತಿ ನೀಡಿ ಉತ್ತೇಜನ ನೀಡಬೇಕು. ಬೆಳೆ ವಿಮೆ ಮಾಡಿಸಲು ರೈತರಿಗೆ ಮಾಹಿತಿ ನೀಡಿ. ರೈತರ ಜೊತೆ ಗೌರವಯುತವಾಗಿ ಅಧಿಕಾರಿಗಳು ನಡೆದುಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕು. ಅಧಿಕಾರಿಗಳು ಡೈರಿ ಬರೆಯುವ ಅಭ್ಯಾಸ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ ಅವರಿಗೆ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ಈ ವರ್ಷ 14 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ 6 ಜನರಿಗೆ ಪರಿಹಾರ ವಿತರಣೆ ಬಾಕಿ ಇದೆ. ಆತ್ಮ ಹತ್ಯೆ ಮಾಡಿಕೊಂಡಿರುವ ಎಲ್ಲಾ ರೈತರಿಗೆ ಕೂಡಲೇ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.