ಮೈಸೂರು :ನೀವು ಗೋಮಾಂಸ ತಿಂತೀರಿ ಅಂತಾ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.
ನೀವು ಗೋಮಾಂಸ ತಿಂತೀರಿ ಅಂತಾ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ?: ಪ್ರತಾಪ್ ಸಿಂಹ ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಮ್ಮ ಅಕ್ಕ ಪಕ್ಕದಲ್ಲಿರುವ ಕೊಡವರು ಗೋಮಾಂಸ ತಿನ್ನಬಹುದು. ಆದ್ರೆ, ಅವರ ಕಾರಣಕ್ಕೆ ಇಡೀ ಕೊಡವರನ್ನ ಗೋಮಾಂಸ ತಿನ್ನುತ್ತಾರೆ ಎಂದರೆ ಹೇಗೆ.? ನೀವು ಗೋಮಾಂಸ ತಿಂತೀರಿ ಅಂತಾ ಇಡೀ ಕುರುಬ ಸಮಾಜ ಬೀಫ್ ತಿಂತಾರೆ ಅನ್ನೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿವೇಚನೆ ಇಲ್ಲದೆ ಯಾಕೇ ಮಾತನಾಡಿದ್ದಾರೆ ಅನ್ನೋದೆ ನನಗೆ ಅರ್ಥ ಆಗಿಲ್ಲ. ಆತ್ಮದ್ರೋಹದ ಮಾತುಗಳನ್ನ ಕಾಂಗ್ರೆಸ್‌ನವರು ಮಾತ್ರ ಮಾತನಾಡೋಕೆ ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಗೋಮಾತೆಯನ್ನ ಎರಡನೇ ತಾಯಿಯಾಗಿ ನೋಡುತ್ತಾರೆ ಎಂದರು.
ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಬೇಡಿ. ನಿಮ್ಮ ತಪ್ಪಿನ ಅರಿವಾಗಿ ಅದನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತಾ ಹೇಳಿದ್ದೀರಾ.. ಆದ್ರೆ, ಇನ್ನು ಮುಂದೆ ಕೊಡವರಿಗೆ ನೋವಾಗುವಂತೆ ಮಾತನಾಡಬೇಡಿ ಎಂದು ಹೇಳಿದರು.
ಜನರನ್ನ ಇನ್ನೆಷ್ಟು ದಿನ ಮನೆಯಲ್ಲಿ ಕೂರಿಸ್ತಿರಾ.? ಕಳೆದ ಮಾರ್ಚ್‌ನಿಂದಲೂ ಜನರು ನಿರ್ಬಂಧದ ವ್ಯವಸ್ಥೆಯಲ್ಲೇ ಇದ್ದಾರೆ. ಇನ್ನಾದ್ರು ಜನರು ಓಡಾಡಲು ಬಿಡಿ. ಮಾಸ್ಕ್ ಹೆಸರಿನಲ್ಲಿ ಜನರಿಗೆ ಅನಗತ್ಯ ತೊಂದರೆ ಕೊಡಬೇಡಿ ಎಂದು ಹೇಳಿದರು.
ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿಬಂದಿದ್ದೇನೆ. ಎಲ್ಲ ಕಡೆ ಕೊರೊನಾ ರೂಪಾಂತರದ ಬಗ್ಗೆ ಚರ್ಚೆ ಇದೆ. ಆದ್ರೆ, ಜನರನ್ನ ಹೆಚ್ಚು ದಿನ ನಿರ್ಬಂಧ ಮಾಡೋಕೆ ಆಗೋಲ್ಲ. ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಕಡ್ಡಾಯ ಮಾಡಿ. ಆದ್ರೆ, ಮಾಸ್ಕ್ ಹೆಸರಿನಲ್ಲಿ ಕಾರು, ಬೈಕ್ ನಿಲ್ಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದರು.
ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರ :ಈ ಬಾರಿ ಬಿಜೆಪಿಗೆ ಮೈಸೂರು ಪಾಲಿಕೆ ಮೇಯರ್ ಸ್ಥಾನ ಬೇಕೇಬೇಕು. ಮೈಸೂರಿನ ಸಮಗ್ರ ಅಭಿವೃದ್ಧಿ ಆಗಬೇಕೆಂದ್ರೆ ಮೇಯರ್ ಸ್ಥಾನ ನಮಗೆ ಕೊಡಿ ಎಂದು ಆಗ್ರಹಿಸಿದರು.
ನಾವು ಪಾಲಿಕೆಯಲ್ಲಿ ಎಲ್ಲರಿಗಿಂತ ಹೆಚ್ಚು ಸ್ಥಾನಗಳನ್ನ ಗೆದ್ದಿದ್ದೇವೆ. 22 ಸ್ಥಾನ ಇರುವ ನಮಗೆ ಯಾರು ಬೇಕಾದ್ರು ಸಹಕಾರ ಕೊಡಬಹುದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರು ಪಾಲಿಕೆಯಲ್ಲೂ ಬಿಜೆಪಿ ನೇತೃತ್ವದ ಅಧಿಕಾರ ಇದ್ರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ನಮಗೆ ಒಮ್ಮೆಯೂ ಮೈಸೂರು ಪಾಲಿಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಹಿಂದೆ ಜೆಡಿಎಸ್ ಜೊತೆ ಹೊಂದಾಣಿಕೆ ಆಗಿದ್ದಾಗ ನಾಲ್ಕು ಬಾರಿ ಉಪಮೇಯರ್ ಮಾತ್ರ ಆಗಿದ್ದೇವೆ. ಈ ಬಾರಿ ಯಾರ ಜೊತೆ ಹೊಂದಾಣಿಕೆ ಆದರೂ ಮೇಯರ್ ಸ್ಥಾನ ನಮಗೇ ಬೇಕು. ನಿಮಗೆಲ್ಲ ಸಾಕಷ್ಟು ಅವಕಾಶ ಕೊಟ್ಟಾಗಿದೆ. ನಮಗೂ ಒಮ್ಮೆ ಪಾಲಿಕೆಯಲ್ಲಿ ಮೇಯರ್ ಸ್ಥಾನ ನೀಡಿ ಅವಕಾಶ ಕೊಡಿ ಎಂದು ತಿಳಿಸಿದರು.
ಗೋಶಾಲೆಯಲ್ಲಿ ಶ್ರಮದಾನ ಮಾಡಿದ ಪ್ರತಾಪ್‌ಸಿಂಹ :ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ ಪಿಂಜಾರಪೋಲುನಲ್ಲಿ ಸಂಸದ ಪ್ರತಾಪಸಿಂಹ ಅವರು ಗೋಪಾಲಕನಾಗಿ ಕೆಲಸ ಮಾಡಿದರು.