ಮೈಸೂರು:ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ (29) ಎಂಬವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ವೈದ್ಯರು ಯುವಕನ ಕುಟುಂಬಸ್ಥರ ಒಪ್ಪಿಗೆ ಪಡೆದು ಹಲವು ರೋಗಿಗಳಿಗೆ ಅಂಗಾಂಗ ಕಸಿ ಮಾಡಿದ್ದಾರೆ. ಈ ಮೂಲಕ ಅಭಿಷೇಕ್ ಐದು ಜನರ ಬಾಳಿಗೆ ಬೆಳಕಾಗಿದ್ದಾರೆ.
ಮಳವಳ್ಳಿ ತಾಲೂಕು ಹಲಗೂರು ಗ್ರಾಮದ ನಿವಾಸಿಯಾದ ಎ.ಎನ್.ಅಭಿಷೇಕ್ ಅವರು ಟಿ.ಕೆ.ಗ್ರಾಮದ ಬಳಿ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿತ್ತು. ಸಿಟಿ ಸ್ಕ್ಯಾನ್‌ನ ನಡೆಸಿದ್ದ ವೈದ್ಯರು ಮೆದುಳಿಗೆ ಪೆಟ್ಟಾಗಿರುವುದನ್ನು ಗುರುತಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆಗಸ್ಟ್ 22ರಂದು ಮೆದುಳು ನಿಷ್ಕ್ರಿಯಗೊಂಡು ಅಭಿಷೇಕ್ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ನಂತರ ಕುಟುಂಬಸ್ಥರ ಅನುಮತಿ ಪಡೆದು 1994ರ ಮಾನವ ಅಂಗಾಂಗಗಳ ಕಸಿ ಕಾಯಿದೆ ಅನುಸಾರ ಆಸ್ಪತ್ರೆ ವೈದ್ಯರ ತಂಡ ಪರೀಕ್ಷೆ ನಡೆಸಿ, ಅಂಗಾಂಗ ದಾನಕ್ಕೆ ವ್ಯಕ್ತಿ ಅರ್ಹರಾಗಿದ್ದಾರೆ ಎಂದು ತಿಳಿಸಿದರು. ಅಂಗಾಂಗ ದಾನದ ಶಿಷ್ಟಾಚಾರದಂತೆ ಜೀವ ಸಾರ್ಥಕತೆ ಸಂಸ್ಥೆಯ ಅಧಿಕಾರಿಗಳು ಅಂಗಾಂಗಗಳನ್ನು ಸ್ವೀಕರಿಸಿದ್ದಾರೆ.
ಅಭಿಷೇಕ್ ದೇಹದಿಂದ ಕಸಿ ಮಾಡಲಾದ ಯಕೃತ್ ಅನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ, ಎರಡು ಕಿಡ್ನಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ, ಕಾರ್ನಿಯಾಗಳನ್ನು ನಗರದ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಮಹಿಳೆ: ಐವರ ಬಾಳು ಬೆಳಗಿಸಿದ ಅಂಗಾಂಗ ದಾನ!
ಇಂಥದ್ದೇ ಪ್ರಕರಣ:ಇತ್ತೀಚಿಗೆ, ಚಿಕಿತ್ಸೆ ಫಲಕಾರಿಯಾಗದೇ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿತ್ತು. ಹೆಚ್.ಆರ್ ರಾಕೇಶ್(28) ಎಂಬವರು ತಲೆ ತಿರುಗುವಿಕೆ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇವರ ಮೆದುಳು ನಿಷ್ಕ್ರಿಯಗೊಂಡಿದ್ದು ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದರು.
ಕಳೆದ ಜುಲೈ 23ರ ಸೋಮವಾರದಂದು ರಾಕೇಶ್ ಅವರನ್ನು ತಲೆ ತಿರುಗುವಿಕೆ (ಗಿಡ್ಡಿನೆಸ್) ಹಿನ್ನೆಲೆಯಲ್ಲಿ ಇಲ್ಲಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ರಾಕೇಶ್ ಅವರನ್ನು ತಪಾಸಣೆ ನಡೆಸಿದ ವೈದ್ಯರಿಗೆ ಸಿಟಿ ಸ್ಕ್ಯಾನ್ನಲ್ಲಿ ಮೆದುಳಿಗೆ ಗಂಭೀರ ಗಾಯವಾಗಿರುವುದು ಗೊತ್ತಾಗಿತ್ತು. ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳ ಬಳಿಕ ಅಂದರೆ ಜುಲೈ 29ರಂದು ಇವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಸಂಬಂಧ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದು, ಅಂಗಾಂಗ ದಾನದ ಕುರಿತು ಸಮಾಲೋಚನೆ ನಡೆಸಿದ್ದರು. ಬಳಿಕ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ರಾಕೇಶ್ ಅವರ 2 ಕಿಡ್ನಿಗಳು, 1 ಲಿವರ್, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿತ್ತು.