ಮೈಸೂರು : ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ಆಚರಣೆ ಮಾಡಿದ್ದಾರೆ. ಇದೊಂದು ಅಧ್ವಾನ ದಸರಾ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಸ್ವಪಕ್ಷೀಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮೈಸೂರಿನವರು ಉಸ್ತುವಾರಿ ಆಗಿರಲ್ಲ. ಮೈಸೂರು ನಗರದ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ನಡೆಸಿದ್ದಾರೆ. ಈಗಿನ ಉಸ್ತುವಾರಿ ಸಚಿವರಿಗೆ ಪಾಪ ಅನುಭವ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ಆಚರಣೆ : ಮೈಸೂರಿನವರೇ ಜಿಲ್ಲಾ ಮಂತ್ರಿ ಆಗಬೇಕಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ನಡೆಸಿದ್ದಾರೆ. ಅದ್ದೂರಿ ದಸರಾ ನಿಜ, ಆದರೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಅವಕಾಶ ಕೊಟ್ಟಿಲ್ಲ. ಟಾರ್ಚ್ ಲೈಟ್ ಪರೇಡ್ ಸ್ವಲ್ಪವೂ ಚೆನ್ನಾಗಿಲ್ಲ. ಟಾರ್ಚ್ ಲೈಟ್ ಪರೇಡ್‌ನಲ್ಲಿ ಮೋಟರ್ ಸೈಕಲ್ ರೈಡ್ ಮುಖ್ಯವಾಗಿರುತ್ತದೆ. ಅದನ್ನು ನೋಡಲು ಜನರು ಬರುತ್ತಾರೆ. ಆದರೆ, ಮೋಟರ್ ಸೈಕಲ್ ರೈಡ್ ಈ ಬಾರಿ ಆಕರ್ಷಣೆಯಾಗಿ ಇರಲಿಲ್ಲ. ಮೋಟರ್ ಸೈಕಲ್ ರೈಡ್‌ಗೆ ಹಿಂದಿನ ಬಾಕಿ ಹಣವನ್ನೇ ಕೊಟ್ಟಿಲ್ವಂತೆ ಎಂದು ಹೇಳಿದರು.
ದಸರಾ ಆಚರಣೆಗೆ ಪ್ರಾಧಿಕಾರ ಮಾಡಬೇಕು : ಜಂಬೂ ಸವಾರಿ ಸುತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದರು. ದೇವರ ಕೃಪೆ ಯಾವುದೇ ಅಪಾಯ ಉಂಟಾಗಿಲ್ಲ. ಪೋಲಿಸ್ ರವರು ನಿಯಂತ್ರಣ ಮಾಡಬೇಕಿತ್ತು. ಆದರೆ, ಪೊಲೀಸರೇ ಫೋಟೋ ತೆಗೆದುಕೊಳ್ಳಲು ನಿಂತಿದ್ದರು ಎಂದು ಹೇಳಿದರು. ಇನ್ನು ದಸರಾವನ್ನು ಸಾಂಪ್ರದಾಯಿಕ ಹಾಗೂ ಅದ್ಧೂರಿಯಾಗಿ ಮಾಡಲು ದಸರಾ ಪ್ರಾಧಿಕಾರ ಕಡ್ಡಾಯವಾಗಿ ಮಾಡಲೇಬೇಕು. ಇದರಿಂದ ದಸರಾ ಮಾಡಲು ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.