ಕರ್ನಾಟಕ

karnataka

ETV Bharat / state

ನೂತನ ಕೈಗಾರಿಕಾ ನೀತಿಯು ಎಂಎಸ್‍ಎಂಇ ಉತ್ತೇಜನಕ್ಕೆ ಪೂರಕ : ಆರ್.ವಿನೋತ್‍ ಪ್ರಿಯಾ

ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕೈಗಾರಿಕೆಗಳಲ್ಲಿ ಯುವಕರಿಗೆ ತರಬೇತಿ ನೀಡಿ, ಅವರಿಗೆ ಅಲ್ಲಿಯೇ ಉದ್ಯೋಗ ನೀಡಬಹುದು ಎಂಬ ಸಲಹೆ ಕೇಳಿ ಬಂದಿದೆ. ಈ ನೀತಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಎಂಎಸ್‍ಎಂಇಗಳ ಚಟುವಟಿಕೆಗಳನ್ನು ಗಮನಿಸಬೇಕು..

ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು’ಕುರಿತ ಕಾರ್ಯಕ್ರಮ
ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು’ಕುರಿತ ಕಾರ್ಯಕ್ರಮ

By

Published : Sep 8, 2020, 9:38 PM IST

ಮೈಸೂರು : ನೂತನ ಕೈಗಾರಿಕಾ ನೀತಿ 2020-25ರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೈಗಾರಿಕೆಗಳ ಆರ್ಥಿಕ ಪುನಶ್ಚೇತನಕ್ಕೆ ಪೂರಕ ಅಂಶಗಳನ್ನು ಒಳಗೊಂಡಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಆರ್. ವಿನೋತ್‍ ಪ್ರಿಯಾ ಅವರು ಹೇಳಿದ್ದಾರೆ.

ಮಂಗಳವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮೈಸೂರಿನಲ್ಲಿ ನಡೆದ`ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು’ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ನೂತನ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಸಣ್ಣ ಕೈಗಾರಿಕೋದ್ಯಮದಲ್ಲಿ ಮಾರಾಟಗಾರರ ಅಭಿವೃದ್ಧಿ, ನಿರಂತರ ಉದ್ಯೋಗವಕಾಶ ಮತ್ತು ಉತ್ಪಾದನೆಗೆ ಅನುಕೂಲವಾಗುವ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದರು. ಕೊವೀಡ್-19 ವಿಷಮ ಪರಿಸ್ಥಿತಿಯಲ್ಲಿ ಜಾರಿಯಾದ ಲಾಕ್‍ಡೌನ್ ಕ್ರಮದಿಂದಾಗಿ ಬಹುತೇಕ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ನಷ್ಟ ಅನುಭವಿಸಿವೆ. ಇತ್ತೀಚಿಗಷ್ಟೇ ಕೈಗಾರಿಕಾ ವಲಯದಲ್ಲಿ ನಿಧಾನ ಚೇತರಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಇಲಾಖೆಯಿಂದ ಯಾವ ರೀತಿ ಬೆಂಬಲ ನೀಡಬೇಕೆಂಬುದನ್ನು ಚರ್ಚಿಸಿ ಕ್ರಮವಹಿಸಲಾಗುವುದು.

ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕೈಗಾರಿಕೆಗಳಲ್ಲಿ ಯುವಕರಿಗೆ ತರಬೇತಿ ನೀಡಿ, ಅವರಿಗೆ ಅಲ್ಲಿಯೇ ಉದ್ಯೋಗ ನೀಡಬಹುದು ಎಂಬ ಸಲಹೆ ಕೇಳಿ ಬಂದಿದೆ. ಈ ನೀತಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಎಂಎಸ್‍ಎಂಇಗಳ ಚಟುವಟಿಕೆಗಳನ್ನು ಗಮನಿಸಬೇಕು ಎಂದರು.

ಜಿಲ್ಲೆಯಲ್ಲಿ ನೂತನ ಕೈಗಾರಿಕಾ ವಸಾಹತು ಸ್ಥಾಪನೆಯಾಗಬೇಕು ಎಂದು ಅನೇಕರು ಅರ್ಜಿಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ಸಂಘ-ಸಂಸ್ಥೆಗಳ ಜೊತೆ ಸಮಾಲೋಚಿಸಿ ಸೂಕ್ತ ಪ್ರದೇಶದಲ್ಲಿ 50 ಎಕರೆ ಜಾಗ ಖರೀದಿಸಿ ಸ್ಥಾಪಿಸಲಾಗುವುದು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಹೆಚ್ ಎಂ ಶ್ರೀನಿವಾಸ್ ಅವರು ಮಾತನಾಡಿ, ನೂತನ ಕೈಗಾರಿಕಾ ನೀತಿಯಲ್ಲಿ ಉದ್ಯೋಗದ ಗುರಿ, ಆದಾಯ ಮತ್ತು ಬಂಡವಾಳ ಹೂಡಿಕೆಯ ಗುರಿ ಹೊಂದಲಾಗಿದೆ ಎಂದು ನೂತನ ಕೈಗಾರಿಕಾ ನೀತಿಯ ಪ್ರಮುಖ ಅಂಶಗಳನ್ನು ವಿವರಿಸಿದರು.

ABOUT THE AUTHOR

...view details