ಮೈಸೂರು :ಬರುವ ಜೂನ್ 21ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ಇರಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ ಹಿನ್ನೆಲೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮ ಮೈಸೂರು, ನಮ್ಮ ಹೆಮ್ಮೆ ನಮ್ಮ ಮಹಾರಾಜರು' ಹೆಸರಿನಲ್ಲಿ ಅಭಿಯಾನ ನಡೆಯುತ್ತಿದೆ.
ಆಧುನಿಕ ಯೋಗ ಜಗದ್ವಿಖ್ಯಾತಿಯಾಗಲು ಮೈಸೂರು ಅರಸರ ಕೊಡುಗೆ ಇದೆ. ರಾಜವಂಶಸ್ಥರನ್ನ ಆಹ್ವಾನಿಸದಿರುವುದು ಸರಿಯಲ್ಲ, ನಮಗೆ ಯದುವೀರ ಅವರು ಇಲ್ಲದ ಯೋಗ ದಿನವೇ ಬೇಡ, ಮೈಸೂರಿನವರೇ ಇಲ್ಲದ ವೇದಿಕೆಯ ಕಾರ್ಯಕ್ರಮ ನಮಗೇಕೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.