ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಬಿನಿ ಹಿನ್ನೀರಿನ ಬಳಿ ಕಾಣಿಸಿಕೊಳ್ಳುತ್ತಿದ್ದ ಭೋಗೇಶ್ವರ ಅಲಿಯಾಸ್ ಮಿಸ್ಟರ್ ಕಬಿನಿ ಖ್ಯಾತಿಯ ಒಂಟಿ ಸಲಗ ಈಗ ಕೇವಲ ನೆನಪು ಮಾತ್ರ. ನೆಲಕ್ಕೆ ಮುಟ್ಟುವ ಜೋಡಿ ದಂತ ತನ್ನ ಗಾಂಭೀರ್ಯದ ನಡಿಗೆಯಯ ಮೂಲಕ ದಶಕಗಳಿಗೂ ಅಧಿಕ ಕಾಲ ಪ್ರವಾಸಿಗರ ಮನಸೂರೆಗೊಳಿಸಿದ ಮಿಸ್ಟರ್ ಕಬನಿಗೆ 70 ವರ್ಷಗಳ ವಯಸ್ಸಾಗಿತ್ತು. ಈ ಆನೆಗೆ ಪ್ರೀತಿಯಿಂದ ಜನರು ಇಟ್ಟ ಮತ್ತೊಂದು ಹೆಸರು 'ಕಬಿನಿಯ ಶಕ್ತಿಮಾನ್'.
ಕಬಿನಿ ಶಕ್ತಿಮಾನ್ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ವಾಸವಾಗಿದ್ದದ್ದೇ ಒಂದು ಹೆಗ್ಗಳಿಕೆ. ಯಾರಿಗೂ ತೊಂದರೆ ನೀಡದ ಅದರ ಗುಣ, ಅದರ ಉದ್ದನೆಯ ದಂತದೊಳಗಿಂದ ಸೊಂಡಿಲು ಎಳೆದುಕೊಂಡು ಆಹಾರ ಸೇವಿಸುವ ವಿಧಾನ, ಅದರ ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನವನ್ನ ಸೆಳೆಯುತ್ತಿತ್ತು.
ಓದಿ:ನೀಳ ದಂತ, ರಾಜ ಗಾಂಭೀರ್ಯದ ನಡಿಗೆಯ ಕಬಿನಿಯ ಶಕ್ತಿಮಾನ್ 'ಭೋಗೇಶ್ವರ' ಇನ್ನಿಲ್ಲ
ಉದ್ದನೆಯ ದಂತಕ್ಕೆ ಮನಸೋತಿದ್ದ ಪ್ರವಾಸಿಗರು: ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಭಾರಿ ಗಾತ್ರದ ದಂತ ಹೊಂದಿರುವ 5-6 ಆನೆಗಳಿದ್ದು, ಅವುಗಳಲ್ಲಿ ಭೋಗೇಶ್ವರನ ದಂತ ನೆಲಕ್ಕೆ ತಾಗುತ್ತಿತ್ತು. ಇನ್ನೆರಡು ಹಿರಿಯ ಆನೆಗಳಿಗೆ ದಂತ ನೆಲಕ್ಕೆ ತಾಗುವಂತೆ ಬಾಗಿದ್ದರೂ ಕೂಡ, ಭೋಗೇಶ್ವರನಂತೆ ಕಾಣುತ್ತಿರಲಿಲ್ಲ. ಆದ್ದರಿಂದ ಕಬಿನಿಯ ಶಕ್ತಿಮಾನ್ ಭೋಗೇಶ್ವರ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಮಿಸ್ಟರ್ ಕಬಿನಿಯ ನೀಳವಾದ ದಂತ ಒಂದು 2.54 ಮೀಟರ್ ಉದ್ಧವಿದ್ದರೆ, ಮತ್ತೊಂದು 2.34 ಉದ್ದವಿತ್ತು. ಹಾಗೆಯೇ ಎರಡೂ ದಂತಗಳು ಕೂಡ 0.38 ಮೀಟರ್ ಅಗಲ ಇದ್ದವು.
ಭೋಗೇಶ್ವರ ನದಂತ ವಸ್ತುಸಂಗ್ರಹಾಲಯಕ್ಕೆ ?:ಇದುವರೆಗೂ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಆನೆಗಳಿಂದ ದಂತ ಬೇರ್ಪಡಿಸಿ ಮೈಸೂರಿನಲ್ಲಿರುವ ಅರಣ್ಯ ಇಲಾಖೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ, ಭೋಗೇಶ್ವರ ಅತಿ ಉದ್ದನೆಯ ದಂತವನ್ನ ಹೊಂದಿದ್ದರಿಂದ ಅದನ್ನ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡುವಂತೆ ವನ್ಯಜೀವಿ ಪ್ರೇಮಿಗಳಿಂದ ಒತ್ತಾಯ ಕೇಳಿ ಬರುತ್ತಿದೆ. ಆದ್ದರಿಂದ ಅರಣ್ಯ ಇಲಾಖೆಯ ಕಚೇರಿ ಅಥವಾ ಯಾವುದಾದರೂ ವಸ್ತು ಸಂಗ್ರಹಾಲಯದಲ್ಲಿ ಭೋಗೇಶ್ವರನ ದಂತವನ್ನ ಪ್ರದರ್ಶನಕ್ಕಿಡುವ ಅಭಿಪ್ರಾಯ ಅರಣ್ಯ ಇಲಾಖೆ ಅಧಿಕಾರಿಗಳಿಂದ ವ್ಯಕ್ತವಾಗಿದೆ.