ಮೈಸೂರು: ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು 30 ದಿನಗಳಲ್ಲಿ ಪುನಶ್ಚೇತನ ಮಾಡುತ್ತೇನೆ ಎಂದು ಉದ್ಯಮಿ ಹಾಗೂ ಶಾಸಕ ಮುರುಗೇಶ್ ನಿರಾಣಿ ಹೇಳಿದರು.
ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದ ನಡೆಸಿದ ಶಾಸಕ ಮುರುಗೇಶ್ ನಿರಾಣಿ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ತುಕ್ಕು ಹಿಡಿದಿದ್ದು, ಅದನ್ನು 30 ದಿನಗಳಲ್ಲಿ ಪುನಶ್ಚೇತನ ಮಾಡುತ್ತೇನೆ. ಆ ಕಾರ್ಖಾನೆಯಲ್ಲಿ ಇಲ್ಲಿಯವರೆಗೆ ಕೆಲಸ ಮಾಡಿರುವವರಿಗೆ ಬಾಕಿ ಹಣ ಕೊಡಬೇಕು ಎಂಬ ಕರಾರು ಇದ್ದು, ಕಾರ್ಖಾನೆ ಪುನಶ್ಚೇತನಗೊಂಡು ಆರಂಭವಾದ 24 ಗಂಟೆಗಳಲ್ಲಿ ಕಾರ್ಮಿಕರಿಗೆ ಬಾಕಿ ಹಣ ನೀಡುವುದಾಗಿ ಭರವಸೆ ನೀಡಿದರು.
ಮೈ ಶುಗರ್ ಕಾರ್ಖಾನೆ ನಮ್ಮ ತಾತನ ಮನೆಯ ಆಸ್ತಿ ಅಲ್ಲ. ಅದರ ಹರಾಜು ಪ್ರಕ್ರಿಯೆ ನಡೆದಿಲ್ಲ. ಪ್ರಕ್ರಿಯೆ ನಡೆದು ಬಿಡ್ ಕೂಗಿದಾಗ ನನಗೆ ಸಾಮರ್ಥ್ಯ ಇದ್ದರೆ ಆ ಕಾರ್ಖಾನೆಯನ್ನು ತೆಗೆದುಕೊಳ್ಳುತ್ತೇನೆ ಎಂದರು.
ಕೆಆರ್ಎಸ್ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಾಣವಾಗುವುದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನೊಬ್ಬ ಉದ್ಯಮಿ, ನಂತರ ಶಾಸಕನಾದೆ. ಆದರೆ ಪಕ್ಷ ನನಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದರು.