ಮೈಸೂರು:2 ವರ್ಷ ನೀವು ಸಿಎಂ ಎಂದು ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವೆ ಅಲಿಖಿತ ಒಪ್ಪಂದ ಆಗಿದೆ. ಇದು ಯಾರಿಗೂ ಗೊತ್ತಿಲ್ಲ. ಅದರಂತೆ ನಾಯಕತ್ವದ ಬದಲಾವಣೆ ನಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಇಂದು ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್ ಮಠಾಧೀಶರು ಒಂದೇ ಪಕ್ಷದ ಜತೆ, ಒಂದೇ ನಾಯಕತ್ವದ ಜತೆ ಗುರುತಿಸಿಕೊಳ್ಳುತ್ತಿದ್ದಾರೆ ಹಾಗೂ ಅವರ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಮಠಾಧೀಶರು ಧಾರ್ಮಿಕವಾಗಿ ಸಮಾಜದಲ್ಲಿ ಪಕ್ಷ ಭೇದ ಮರೆತು ಸರಿಯಾದ ಮಾರ್ಗದರ್ಶನ ಹಾಗೂ ಸಲಹೆ ನೀಡಬೇಕು.
ನಾಯಕತ್ವ ಬದಲಾವಣೆ ವಿಚಾರ- ಸಂಸದ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ ಈ ರೀತಿ ಒಬ್ಬ ವ್ಯಕ್ತಿಯ ಪರವಾಗಿ ಮತನಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಅವರೇ ಹೇಳುತ್ತಿದ್ದಾರೆ. ನಾಳೆ ಸ್ವಾಮೀಜಿಗಳ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇದು ಒಳ್ಳೆಯದಲ್ಲ. ಅಭಿಮಾನ ಮಿತಿಮೀರಬಾರದು. ಸ್ವಾಮೀಜಿಗಳು ಈ ರೀತಿಯ ಸಭೆ ಸಮಾರಂಭಗಳನ್ನು ಮಾಡಬಾರದು. ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಬಾರದು ಎಂಬುವುದು ನನ್ನ ಮನವಿ ಎಂದರು.
ನಾಯಕತ್ವದ ಒಪ್ಪಂದ ಬಗ್ಗೆ ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರಿಗೂ ಗೊತ್ತಾಗಿದೆ. ಯಡಿಯೂರಪ್ಪ ಸರ್ಕಾರ ಬರಬೇಕಾದರೆ ಬಹುಮತ ಇರಲಿಲ್ಲ. ಸಮ್ಮಿಶ್ರ ಸರ್ಕಾರದಿಂದ 17 ಜನ ಬಂದ ಮೇಲೆ ಸರ್ಕಾರ ರಚನೆಯಾಗಿದ್ದು, 2 ವರ್ಷಗಳ ಹಿಂದೆ 17 ಜನ ಬರುವುದಕ್ಕೆ ಯಡಿಯೂರಪ್ಪ ಅವರೇ ಕಾರಣ. ಇದಕ್ಕೆ ಹೈಕಮಾಂಡ್ ಒಪ್ಪಿತ್ತು.
75 ವರ್ಷ ಮೀರಿದವರು ಮುಖ್ಯಮಂತ್ರಿ ಆಗಬಾರದು ಎಂದು ಪಕ್ಷದಲ್ಲಿ ನಿಯಮವಿದೆ. ಆದರೆ, ಸರ್ಕಾರ ಬರಲು ಕಾರಣ ಎಂದು 2 ವರ್ಷ, ನೀವೇ ಸಿಎಂ ಆಗಿ ಎಂದು ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವೆ ಅಲಿಖಿತ ಒಪ್ಪಂದ ಆಗಿದೆ. ಅದರ ಪ್ರಕಾರ 2 ವರ್ಷವಾಗಿದೆ. ಇದರ ಬಗ್ಗೆ ಹೈಕಮಾಂಡ್ ಕರೆದು ಮಾತನಾಡಿರಬಹುದು. ಯಡಿಯೂರಪ್ಪ ಅವರನ್ನು ಪಕ್ಷ ಸಂಘಟನೆಗೆ ಬಳಸಬಹುದು. ನಾನು ಈ ಬಗ್ಗೆ ಸಲಹೆ ಕೊಡುವುದಿಲ್ಲ. ನಾವೆಲ್ಲ ಇತ್ತೀಚೆಗೆ ಪಕ್ಷಕ್ಕೆ ಬಂದವರು. ಪಕ್ಷದ ಆಂತರಿಕ ಬೆಳವಣಿಗೆ ಬಗ್ಗೆ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಗುಪ್ತ ಭೇಟಿಯ ಬಗ್ಗೆ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ನನ್ನನ್ನು ಕರೆಯಲು ಬಂದಿದ್ದರು. ಎನ್.ಮಹೇಶ್ ಬಿಜೆಪಿ ಸೇರ್ಪಡೆ ಬಗ್ಗೆ ಅವರನ್ನೇ ಕೇಳಿ ಎಂದರು.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಬಗ್ಗೆ ಏನು ಮಾತನಾಡುವುದಿಲ್ಲ, wait and see: ಸಚಿವ ಜಗದೀಶ್ ಶೆಟ್ಟರ್