ಮೈಸೂರು: 'ನಮ್ಮ ಧರ್ಮದ ಶ್ರೇಷ್ಠತೆಯನ್ನು ನಾವು ನಂಬಿರುವವರು. ನಮಗೆ ಆಕ್ರಮಣ ಪ್ರವೃತ್ತಿ ಇಲ್ಲ. ಆದರೆ ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾನು ಸಹ ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಪ್ರತಿಪಾದಿಸುತ್ತೇನೆ' ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.
ಮತಾಂತರ ನಿಷೇಧ ಕಾಯ್ದೆ ವಿಚಾರ ಈಗ ಚರ್ಚೆಯಾಗುತ್ತಿದ್ದು, ಮತಾಂತರ ಎನ್ನುವುದು ದೇಶಾದ್ಯಂತ ನಡೆಯುತ್ತಿದೆ. ಇದನ್ನು ತಡೆಯುವ ಕೆಲಸ ಮಾಡಬೇಕೆಂದು ಶಾಸಕ ಗೂಳಿಹಟ್ಟಿ ಶೇಖರ್ ಮನವಿ ಮಾಡಿದ್ದಾರೆ. ಇದನ್ನು ಬಿಷಪ್‌ಗಳು ವಿರೋಧ ಮಾಡುತ್ತಿರುವುದು ಸರಿಯಲ್ಲ.
ನೀವು ಮತಾಂತರದಲ್ಲಿ ಭಾಗಿಯಾಗಿಲ್ಲವಾದರೆ ಆತಂಕವೇಕೆ? ಈ ಮತಾಂತರ ನಿಷೇಧ ಕಾಯ್ದೆಯಿಂದ ಮತಾಂತರ ಮಾಡುವವರಿಗೆ ಅನಾನುಕೂಲವಾಗಲಿದೆ. ಇದು ಈ ಕಾಯ್ದೆಯ ಉದ್ದೇಶವಾಗಿದ್ದು, ನಾನು ಸಹ ಮತಾಂತರ ನಿಷೇಧ ಕಾಯ್ದೆಯನ್ನು ಪ್ರತಿಪಾದಿಸುತ್ತೇನೆ ಎಂದರು.
ಕ್ರೈಸ್ತ ಧರ್ಮದವರು ಶಾಲಾ-ಕಾಲೇಜುಗಳಲ್ಲಿ ಮತಾಂತರ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ವಿದ್ಯಾವಂತರಿರುತ್ತಾರೆ. ಅವರು ಕೇರಿ, ಕಾಲೋನಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಹೆಲ್ತ್ ಸೆಂಟರ್ ಮಾಡಿ ಔಷಧಿ ಕೊಡುವ ಮುನ್ನ ಪ್ರಾರ್ಥನೆ ಮಾಡಿ ಔಷಧಿ ಕೊಡುತ್ತಾರೆ. ಆ ಮೂಲಕ ಮತಾಂತರ ತಂತ್ರವನ್ನು ಅನುಸರಿಸುತ್ತಾರೆ.
ಇದನ್ನು ನಿಷೇಧ ಮಾಡಲು ಮತಾಂತರ ನಿಷೇಧ ಕಾಯ್ದೆ ಅವಶ್ಯಕ. ನಾವು ನಮ್ಮ ಧರ್ಮದ ಶ್ರೇಷ್ಠತೆಯನ್ನು ನಂಬಿರುವವರು ನಾವು ಬೇರೆ ಧರ್ಮದ ಮೇಲೆ ಆಕ್ರಮಣ ಮತ್ತು ಪ್ರಹಾರ ಮಾಡುವುದಿಲ್ಲ ಆದರೆ ನಮ್ಮ ಧರ್ಮವನ್ನು ಕಾಪಾಡಿಕೊಳ್ಳುವ ಜವಬ್ದಾರಿ ನಮ್ಮ ಮೇಲೆ ಇದೆ. ರಾಜ್ಯದ ಯತಿಗಳು ಮತಾಂತರದ ವಿರುದ್ಧ ಹೋರಾಟ ಮಾಡಬೇಕೆಂದು ಸಂಸದರು ಹೇಳಿದರು.
ವಿವಿಗೆ ಭೂಮಿ ನೀಡಲು ಕಾಂಗ್ರೆಸ್ ವಿರೋಧ ಏಕೆ?:
ಚಾಣಾಕ್ಯ ವಿವಿ ಸ್ಥಾಪನೆಗೆ ಭೂಮಿ ನೀಡುವ ವಿಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಇರುವುದೇ ಈ ರೀತಿಯ ಬ್ರಿಟಿಷ್ ಮನಸ್ಥಿತಿಯಲ್ಲಿ. ಅವರಿಗೆ ದಾಸ್ಯದ ಮನಸ್ಥಿತಿ ಇದೆ. ಕಾಂಗ್ರೆಸ್ ನವರಿಗೆ ಭಾರತೀಯತೆ, ಭಾರತೀಯ ರಾಜಕೀಯ ವಿಚಾರದ ಬಗ್ಗೆ ಗೌರವ ಪ್ರೀತಿ ವ್ಯಾಮೋಹ ಸಹ ಇಲ್ಲ. ಬಹುಶಃ ಕಾಂಗ್ರೆಸ್‌ನವರಿಗೆ ಚಾಣಾಕ್ಯನ ಬಗ್ಗೆ ಗೊತ್ತಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಪಾತಾಳ ಸೇರುತ್ತಿರುವ ಕಾಂಗ್ರೆಸ್ ಬಗ್ಗೆ ಮಾತನಾಡದಿರುವುದೇ ಸರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.