ಮೈಸೂರು: ತಾಲೂಕು ಕೋರ್ಟ್ನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಎಕಾನಮಿ ಹೇಗೆ ಅರ್ಥ ಆಗುತ್ತೆ? ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷದ ಸಾಧನೆ ಬಗ್ಗೆ ಶುಕ್ರವಾರದಂದು ಪತ್ರಿಕಾ ಹೇಳಿಕೆ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದ ಹಿನ್ನೆಲೆ, ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ತಾಲೂಕು ಕೋರ್ಟ್ನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯಗೆ ಎಕಾನಮಿ ಹೇಗೆ ಅರ್ಥ ಆಗುತ್ತೆ? ಯಾವುದೋ ಒಂದು ಲಾ ಕಾಲೇಜಿನಲ್ಲಿ ಲಾ ಓದಿದವರಿಗೆ ದೇಶದ ಎಕಾನಮಿ ಅರ್ಥ ಆಗೋದು ಹೇಗೆ? ಎಂದು ಪ್ರಶ್ನಿಸಿದರು. ಅನ್ನ ಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯ ಅವರು, ಅವರ ಸ್ವಂತ ಹಣದಿಂದ ಕೊಟ್ಟರೇ? 13 ಬಜೆಟ್ ಬಿಡುಗಡೆ ಮಾಡಿದ್ದ ವ್ಯಕ್ತಿ ಈ ರೀತಿಯ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಮೈಸೂರಿನಿಂದ ಇಂತಹ ಒಬ್ಬ ವಿಚಾರಹೀನ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇವರು ನಮ್ಮೂರಿನವರು ಅಂತಾ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.