ಕರ್ನಾಟಕ

karnataka

ETV Bharat / state

'ಪಿಎಂ ಜನ್ ಮನ್' ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಪ್ರತಾಪ್​ ಸಿಂಹ ಸೂಚನೆ

'ಪಿಎಂ ಜನ್ ಮನ್' ಯೋಜನೆಯನ್ನು ತ್ವರಿಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಸಂಸದ ಪ್ರತಾಪ್​ ಸಿಂಹ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸಂಸದ ಪ್ರತಾಪ್​ ಸಿಂಹ
ಸಂಸದ ಪ್ರತಾಪ್​ ಸಿಂಹ

By ETV Bharat Karnataka Team

Published : Jan 18, 2024, 10:13 AM IST

ಮೈಸೂರು:ಬುಡಕಟ್ಟು ಸಮುದಾಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆದಿವಾಸಿ ಜನಜಾತಿ ನ್ಯಾಯ ಅಭಿಯಾನ (ಪಿಎಂ ಜನಮನ್‌ ಯೋಜನೆ) ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆಯನ್ನು ಮೈಸೂರು-ಕೊಡಗು ಜಿಲ್ಲೆಗಳಲ್ಲಿ ಯಶಸ್ವಿಗೊಳಿಸಲು ಸಮರೋಪದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಪ್ರತಾಪ್​ ಸಿಂಹ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿನ ತಮ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಪಿಎಂ ಯೋಜನೆಯಡಿ ಆದಿವಾಸಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಮೂಲ ಸೌಕರ್ಯವನ್ನು ಕಲ್ಪಿಸುವ 9 ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಪಿಆರ್‌ಡಿಐ ಮೂಲಕ ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಪೌಷ್ಠಿಕಾಂಶ ಹೆಚ್ಚಿಸುವ ಜೊತೆಗೆ ರಸ್ತೆ, ದೂರ ಸಂಪರ್ಕ ಸುಸ್ಥಿರ ಜೀವನಾವಕಾಶಗಳನ್ನು ಕಲ್ಪಿಸುವ ಉದ್ದೇಶದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದಿವಾಸಿಗಳ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ 60 ಲಕ್ಷ ರೂ. ವೆಚ್ಚ ಭರಿಸಿ ತರಬೇತಿ ನೀಡಲಾಗುತ್ತಿದೆ ಎಂದರು.

ಮೈಸೂರು-ಕೊಡಗು ಜಿಲ್ಲೆಯಲ್ಲಿರುವ ಆದಿವಾಸಿ ಹಾಡಿಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸಮೀಕ್ಷೆ ನಡೆಸಲಾಗಿದ್ದು, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ 353 ಹಾಡಿಗಳಿಗೆ ವಸತಿಗಳ ಅವಶ್ಯಕತೆ ಇದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 1,215, ನಂಜನಗೂಡು 76, ಹೆಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ 1, 141, ಪಿರಿಯಾಪಟ್ಟಣ 625, ಹುಣಸೂರಿನಲ್ಲಿ 935 ವಸತಿಗಳ ಬೇಡಿಕೆ ಇದೆ. ಕೇಂದ್ರ ಸರ್ಕಾರದಿಂದ 2.30 ಲಕ್ಷ ರೂ.ಅನುದಾನ ನೀಡಲಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದಲೇ ಅನುದಾನ ದೊರೆಯಲಿದ್ದು, ಈ ಮೂಲಕ ವಸತಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಪ್ರತಾಪ್​ ಸಿಂಹ ಹೇಳಿದರು.

ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಈಗಾಗಲೇ ಹೊಸದಾಗಿ 5 ಫ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿದೆ. 6ನೇ ಪ್ಲಾಟ್‌ ಫಾರಂ ನಿರ್ಮಿಸಿ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಕೂಡ ಕರೆಯಲಾಗಿದೆ. ಮಾರ್ಚ್‌ ತಿಂಗಳ ವೇಳೆಗೆ ಉದ್ಘಾಟಿಸಲು ತೀರ್ಮಾನಿಸಲಾಗಿದೆ ಎಂದರು.

ರೈಲ್ವೆ ಬ್ರಿಡ್ಜ್​ ಹಾಗೂ ಗೇಟ್‌ ಇರುವ ಭಾಗಗಳಲ್ಲಿ ನಿತ್ಯ ವಾಹನ ಸಂಚಾರ ದಟ್ಟನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನೇಗೌಡನ ಕೊಪ್ಪಲುವಿನಲ್ಲಿ ರೈಲ್ವೆ ಕೆಳ ಸೇತುವೆಯನ್ನು ನೂರು ಅಡಿಗೆ ವಿಸ್ತರಿಸುವುದು ಹಾಗೂ ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್‌ನಲ್ಲಿ ಕೆಳಸೇತುವೆ ಹಾಗೂ ಕೆಆರ್‌ಎಸ್‌‍ ರಸ್ತೆಯ ಬಳಿ ಅಂಡರ್‌ ಪಾಸ್‌‍ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ದವಾಗಿದೆ. ಸದ್ಯ ಕೆ.ಜಿ ಕೊಪ್ಪಲಿನಲ್ಲಿರುವ ಬ್ರಿಡ್ಜ್​ನಲ್ಲಿ ಏಕ ಕಾಲಕ್ಕೆ ಎರಡೂ ಕಡೆ ವಾಹನಗಳ ಸಂಚಾರ ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸೇತುವೆಯನ್ನು 100 ಮೀ.ಗೆ ವಿಸ್ತರಿಸಲು 15.15 ಕೋಟಿ ರೂ.ಗಳಲ್ಲಿ ವೆಚ್ಚ ಕಾಮಗಾರಿ ಆರಂಭಿಸಲಾಗುವುದು. ಕುಕ್ಕರಹಳ್ಳಿ ಕೆರೆ ಬಳಿಯ ಲೆವೆಲ್‌ ಕ್ರಾಸಿಂಗ್‌ನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಲು ಮುಡಾ ವತಿಯಿಂದಲೂ ಸಹಕರಿಸಬೇಕಿದೆ. ಕೆಳಸೇತುವೆ ನಿರ್ಮಾಣದಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಮೈಸೂರು-ಚಾಮರಾಜನಗರ ನಡುವೆ ಸಂಚರಿಸುವ ರೈಲುಗಾಡಿಗಳು ಹಾಲಿ ಇರುವ ಲೆವಲ್‌ ಕ್ರಾಸಿಂಗ್‌ ಬಳಿ ಆಗಾಗ ನಿಲ್ಲುವುದರಿಂದ ರಸ್ತೆ ಪ್ರಯಾಣಿಕರು ಹೆಚ್ಚು ಸಮಯ ಕಾಯುವುದು ತಪ್ಪಲಿದೆ. ಇದೇ ಮಾದರಿಯಲ್ಲಿ ಕೆ.ಆರ್‌.ಎಸ್‌‍.ರಸ್ತೆಯಲ್ಲಿ ಕೇಳಸೇತುವೆಯನ್ನು ವಿಸ್ತರಿಸಲಾಗುವುದು ಎಂದು ಪ್ರತಾಪ್​ ಸಿಂಹ ವಿವರ ನೀಡಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಹೊಸ ಬಡಾವಣೆ ನಿರ್ಮಾಣ, ಜಾಗ ಗುರುತಿಸುವ ಕೆಲಸ ಆರಂಭ: ಡಿಸಿಎಂ ಡಿಕೆಶಿ

ABOUT THE AUTHOR

...view details