ಮೈಸೂರು:ನನ್ನ ಮೇಲೆ ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂಬ ಡಿಸಿ ರೋಹಿಣಿ ಸಿಂಧೂರಿ ಹೇಳಿಕೆ ವಿಚಾರವಾಗಿ ಉತ್ತರಿಸಿದ ಶಾಸಕ ಸಾ.ರಾ ಮಹೇಶ್, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ.?, ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳಾ?, ವಾಲ್ಮಿಕಿ ಜಯಂತಿ ಆಚರಣೆಗೆ ಬರದೇ ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ.
ಸೋಂಕಿತರಿಗೆ ಮಾತ್ರೆ ಕೊಡಲು ದುಡ್ಡಿಲ್ಲ. ಕೊರೊನಾ ಸಂದರ್ಭದಲ್ಲಿ ಇನ್ಡೋರ್ ಜಿಮ್, ಇನ್ಡೋರ್ ಸ್ವಿಮ್ಮಿಂಗ್ ಪೂಲ್ ಏಕೆ?, ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು?, ಇದಕ್ಕೆ ಹಣ ಎಲ್ಲಿಂದ ಬಂತು?, ಅದನ್ನು ಕಟ್ಟಿರೋದು ಸುಳ್ಳಾ?, ರಾಜ್ಯದ ಸಿಎಂ, ರಾಷ್ಟ್ರದ ಪಿಎಂ ಮನೆಯಲ್ಲಿ ಈಜುಕೊಳ ಇದೆಯೇ?, ರಾಜ್ಯದ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಇದೆಯೇ?, ನಾವು- ನೀವು ಜನರಿಗೆ ಮಾದರಿಯಾಗಿರಬೇಕು. ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ?, ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳಾ?, ಈಜುಕೊಳಕ್ಕೆ ವ್ಯಯಿಸಿದ 50 ಲಕ್ಷ ರೂ ಹಣ ಕೊರೊನಾಗೆ ಬಳಸಬೇಕಿತ್ತು. ನಿಮ್ಮನ್ನು ಯಾರು ಕೇಳಬೇಕು?ಎಂದು ವಾಗ್ದಾಳಿ ನಡೆಸಿದರು.
ಇಂತಹ ಪರಿಸ್ಥಿತಿಯಲ್ಲೂ ಮೈಸೂರಿನಲ್ಲಿ ಶಾಸಕರು ಪಾಲಿಕೆ ಸದಸ್ಯರು ಕೆಲಸ ಮಾಡುತ್ತಿರುವುದಕ್ಕೆ ಕ್ಷಮೆ ಕೇಳಬೇಕೇ? ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ. ಇದೆಲ್ಲಾ ಏನೇ ಇರಲಿ ನೊಂದವರ ನಿಟ್ಟುಸಿರು ತಟ್ಟದೇ ಬಿಡುವುದಿಲ್ಲ ಎಂದರು.
ಕೆ.ಆರ್.ನಗರದಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳ ವಿಚಾರವಾಗಿ ಮಾತನಾಡಿ, ಅಲ್ಲಿನ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯಿಡ್ ನೀಡುತ್ತಿದ್ದಾರೆ. ಇದು ಗೊತ್ತಿದ್ದರೆ ಏಕೆ ಕ್ರಮ ಕೈಗೊಂಡಿಲ್ಲ?, ಇದಕ್ಕೆ ಜವಾಬ್ದಾರರು ಯಾರು?, ಇದನ್ನು ಕೇಳುವುದೇ ತಪ್ಪಾಗಿದೆ. ವಿರೋಧ ಪಕ್ಷದವರು ಎಚ್ಚರಿಸುವ ಕೆಲಸ ಮಾಡುತ್ತೇವೆ. ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ. ಇಲ್ಲಿ ಯಾರು ಶಾಶ್ವತ ಅಲ್ಲ. ಕಾಲಚಕ್ರ ಉರುಳುತ್ತದೆ. ಕೋವಿಡ್ ಮುಗಿಯಲಿ, ಕೆಲವು ದಾಖಲೆಗಳಿವೆ ಬಿಡುಗಡೆ ಮಾಡುವೆ ಎಂದರು.
ಜಿಲ್ಲಾಧಿಕಾರಿಗಳ ವಿಚಾರವಾಗಿ ದಾಖಲೆ ಬಿಡುಗಡೆ ಮಾಡುತ್ತೇನೆ. ಅಧಿಕಾರಿಗಳು ಶಾಸಕಾಂಗ, ಕಾರ್ಯಾಂಗದ ಮಾತು ಕೇಳಬೇಕು. ಇಂತಹ ಪರಿಸ್ಥಿತಿ ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಡಿಸಿ ರೋಹಿಣಿ ಸಿಂಧೂರಿ ಆರೋಪ-ಪ್ರತ್ಯಾರೋಪದ ಉದಾಹರಣೆಯಾಗಿ ಹೇಳಿದರು. ಡಿಸಿ ಅವರು ಶಾಸಕ ಮಂಜುನಾಥ್ ಜಮೀನು ವಿಚಾರವಾಗಿ ಪತ್ರ ಬರೆದಿದ್ದರು. ನಂತರ ಅದನ್ನು ಅವರೇ ಕ್ಲಿಯರ್ ಮಾಡಿಕೊಟ್ಟಿದ್ದಾರೆ. ಕ್ಲಿಯರ್ ಮಾಡುವುದು ತಪ್ಪಲ್ಲ. ಆದರೆ ಆ ವಿಚಾರವಾಗಿ ಎಲ್ಲರೂ ನನ್ನ ಮಾತು ಕೇಳಬೇಕು ಅನ್ನೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಟಾಸ್ಕ್ಫೋರ್ಸ್ ಕಮಿಟಿಗೆ ಜನರಿಂದ ಆಯ್ಕೆಯಾದ ಶಾಸಕರನ್ನು ಸೇರಿಸಿಕೊಂಡಿಲ್ಲ. ಇನ್ನು ಟಾಸ್ಕ್ಫೋರ್ಸ್ ಸಭೆಗಳಿಗೆ ನಮ್ಮನ್ನು ಕರೆಯೋದು ಇಲ್ಲ. ಕೇವಲ ನಾಮಿನಿ ಪ್ರತಿನಿಧಿಗಳನ್ನು ಸೇರಿಸಿಕೊಂಡು ಸಭೆ ಮಾಡ್ತಾರೆ. ಸಭೆ ಮೇಲೆ ಸಭೆ ನಡೆಸಿದ್ರೂ ಏನು ಪ್ರಯೋಜನವಾಗ್ತಿಲ್ಲ ಎಂದು ಆರೋಪಿಸಿದರು. ತಜ್ಞರು, ಮಾದ್ಯಮಗಳ ವರದಿಯಂತೆ ಈಗಾಗಲೇ ಮೂರನೇ ಅಲೆ ಶುರುವಾಗಿದೆ. ಲಾಕ್ಡೌನ್ನಿಂದ ಈಗಾಗಲೇ ಶ್ರಮಿಕ ವರ್ಗ ತುಂಬಾ ನೊಂದಿದೆ. ಹೋರಾಟದಿಂದ ಬಂದಿರುವ ಸಿಎಂ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದರು. ಆರ್ಥಿಕ ಸಂಕಷ್ಟ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಇದಕ್ಕಾಗಿ ಎಲ್ಲಾ ಶಾಸಕರು, ಪರಿಷತ್ ಸದಸ್ಯರ ಒಂದು ವರ್ಷದ ವೇತನ ಬಳಸಿಕೊಳ್ಳಿ ಎಂದು ಹೇಳಿದರು.