ಮೈಸೂರು:ಜುಬಿಲಂಟ್ ಕಾರ್ಖಾನೆಯ ಸೋಂಕಿನ ಬಗ್ಗೆ ಸಚಿವರು, ಪೊಲೀಸ್ ಅಧಿಕಾರಿಗಳ ದ್ವಂದ್ವ ಹೇಳಿಕೆಯ ಬಗ್ಗೆ ನಂಜನಗೂಡಿನ ಶಾಸಕ ಹರ್ಷವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ.
ನಂಜನಗೂಡಿನ ಜುಬಿಲಂಟ್ ಕಾರ್ಖಾನೆಗೆ ಎಂಟ್ರಿಯಾದ ಕೊರೊನಾ ಸೋಂಕಿನ ಮೂಲದ ಬಗ್ಗೆ ಸಚಿವರಾದ ಸುರೇಶ್ ಕುಮಾರ್, ಡಾ. ಸುಧಾಕರ್, ಎ.ಡಿ.ಜಿ.ಪಿ ಪರಶಿವಮೂರ್ತಿ ಮತ್ತು ಜುಬಿಲಂಟ್ ಕಾರ್ಖಾನೆಯ ಪತ್ರಿಕಾ ಪ್ರಕಟಣೆಗಳು ದ್ವಂದ್ವ ಹೇಳಿಕೆಯಿಂದ ಕೂಡಿದ್ದು, ಸೋಂಕಿನ ಮೂಲವನ್ನು ಕಂಡು ಹಿಡಿಯಬೇಕಿದೆ ಎಂದು ಸ್ಥಳೀಯ ಶಾಸಕ ಹರ್ಷವರ್ಧನ್ ಆಗ್ರಹಿಸಿದ್ದಾರೆ.
ಇಲ್ಲಿ ತುಂಬಾ ಗೊಂದಲ ಇವೆ. ಈ ಗೊಂದಲ ಏಕೆ ಅಂದರೆ ಸಚಿವರು ಹಾಗೂ ಎ.ಡಿ.ಜಿ.ಪಿ ಹೇಳಿಕೆಗಳಿಂದ ಈ ಗೊಂದಲಗಳು ಉಂಟಾಗಿವೆ. ಸಚಿವ ಸುಧಾಕರ್ ಅವರ ಹೇಳಿಕೆಯಲ್ಲಿ ಜುಬಿಲಂಟ್ ನೌಕರ ಚೀನಾಕ್ಕೆ ಟ್ರಾವೆಲ್ ಮಾಡಿದ್ದಾರೆ ಎಂದಿದ್ದಾರೆ. ಚೀನಾದಲ್ಲಿ ಬಹುತೇಕ ಸೋಂಕು ಹರಡಿದ್ದ ಸಂದರ್ಭ ಅಂದರೆ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಯಾಕೆ ಕಂಪನಿಯವರು ನೌಕರನನ್ನು ಚೀನಾಕ್ಕೆ ಕಳುಹಿಸಿದ್ದು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಸಚಿವ ಸುರೇಶ್ ಕುಮಾರ್ ಅವರು ವಿದೇಶಿಯರು ಜುಬಿಲಂಟ್ ಕಂಪನಿಗೆ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಬಂದಿದ್ದರು ಎಂದು ಹೇಳಿದ್ದಾರೆ. ಅಮೆರಿಕಾ, ಜಪಾನ್, ಚೀನಾ, ಜರ್ಮನಿ ಅಂತೆಲ್ಲ ಹೇಳುತ್ತಿರುವುದು ಒಂದು ರೀತಿಯ ಗೊಂದಲ ಮೂಡಿಸಿದೆ ಎಂದು ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಪಿ52 ವ್ಯಕ್ತಿ ವಿದೇಶ ಪ್ರಯಾಣ ಮಾಡಿಲ್ಲ. ಯಾಕಂದ್ರೆ ಆತನ ಬಳಿ ಪಾಸ್ ಪೋರ್ಟ್ ಸಹ ಇಲ್ಲ. ಇಲ್ಲಿಂದ ಯಾವ ನೌಕರರು ಬೇರೆ ದೇಶಕ್ಕೆ ಹೋಗಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.