ಮೈಸೂರು:ಜುಬಿಲಂಟ್ ಕಾರ್ಖಾನೆಗೆ ಕೊರೋನಾ ಸೋಂಕು ಬಂದಿದ್ದು, ಹೇಗೆ ಎಂಬ ಬಗ್ಗೆ ತನಿಖೆ ಮಾಡಲು ಹರ್ಷಗುಪ್ತ ಅವರನ್ನು ನೇಮಕ ಮಾಡಲು ಸರ್ಕಾರ ಸ್ವಲ್ಪ ವಿಳಂಬ ಮಾಡಿದ್ದು , ತನಿಖೆ ದಾರಿ ತಪ್ಪಿದೆ ಎಂದು ನಂಜನಗೂಡು ಬಿಜೆಪಿ ಶಾಸಕ ಸರ್ಕಾರದ ಮೇಲೆ ನೇರ ಆರೋಪ ಮಾಡಿದ್ದಾರೆ.
ಜುಬಿಲಂಟ್ ಕಾರ್ಖಾನೆ ತನಿಖೆ ದಾರಿ ತಪ್ಪಲು ಕಾರಣ ಏನು ?: ಮಾಹಿತಿ ಬಾಯ್ಬಿಟ್ಟ ಶಾಸಕ - ಹರ್ಷಗುಪ್ತ
ಜುಬಿಲಂಟ್ ಕಾರ್ಖಾನೆ ತನಿಖೆ ವಿಷಯದಲ್ಲಿ ಸರ್ಕಾರ ವಿಳಂಬ ಮಾಡಿದ ಕಾರಣ, ತನಿಖೆ ಒಂದು ಕಡೆ ದಾರಿ ತಪ್ಪಿದೆ ಎನಿಸುತ್ತಿದೆ ಎಂದು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಇಂದು ನಂಜನಗೂಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಶಾಸಕ ಹರ್ಷವರ್ಧನ್, ನಾನು ಜುಬಿಲಂಟ್ ಕಾರ್ಖಾನೆಯ ಸೋಂಕಿನ ಮೂಲ ಕಂಡುಹಿಡಿಯಲು ಐಎಎಸ್ ಅಧಿಕಾರಿ ನೇಮಕ ಮಾಡಿ, ತನಿಖೆ ಮಾಡಲು ಮನವಿ ಮಾಡಿದ್ದೆ. ಆದರೆ, ಅವರ ನೇಮಕದಲ್ಲಿ ಸರ್ಕಾರ ಸ್ವಲ್ಪ ವಿಳಂಬ ಮಾಡಿದ ಕಾರಣದಿಂದಾಗಿ ತನಿಖೆ ಒಂದು ಕಡೆ ದಾರಿ ತಪ್ಪಿದೆ ಎನಿಸುತ್ತಿದೆ ಎಂದರು.
ಅಲ್ಲದೇ ವಿಚಾರಣೆ ಬಗ್ಗೆ ಹರ್ಷಗುಪ್ತ ಅವರ ಹೇಳಿಕೆಗಳನ್ನು ನೋಡಿದ್ದೇನೆ ಕೆಲವು ಇಲಾಖೆಗಳು ಸಹಕಾರ ಕೊಡಲ್ಲಿಲ್ಲ ಅಂತಾ ಹೇಳಿದ್ದಾರೆ. ಆದರೆ, ಇವರ ಈ ಮಾತನ್ನು ಕೇಳಿದರೆ ಇದು ಎಷ್ಟು ಆಳವಾಗಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು, ಈ ಕಂಪನಿಯಿಂದ ಬಂದ ಕೆಟ್ಟ ಹೆಸರು ತನಿಖೆ ಮಾಡಿದರೆ ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಲಿದೆ. ನಾನು ನನ್ನ ಕಡೆಯಿಂದ ಎಲ್ಲಾ ಪ್ರಯತ್ನ ಮಾಡಿದೆ. ಆದರೆ ತನಿಖೆಯಿಂದ ಸತ್ಯ ಹೊರ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿಸಿ ನೇತೃತ್ವದಲ್ಲಿ ಸಭೆ ನಡೆಯಬೇಕು :ಜುಬಿಲಂಟ್ ಕಾರ್ಖಾನೆ ಪ್ರಾರಂಭವಾಗಬೇಕಾದರೆ ಡಿಸಿ ನೇತೃತ್ವದಲ್ಲಿ ಮೀಟಿಂಗ್ ಆಗಬೇಕು. ಆ ಸಭೆಗೆ ಉಸ್ತುವಾರಿ ಸಚಿವರು, ಎಂ.ಪಿ ಅವರು ತೀರ್ಮಾನ ತೆಗೆದುಕೊಂಡು ಆನಂತರ ಫ್ಯಾಕ್ಟರಿ ಆರಂಭಿಸಬೇಕು. ಜೊತೆಗೆ ನನ್ನ 3 ಕಂಡಿಷನ್ ಒಪ್ಪಿಕೊಂಡು ಫ್ಯಾಕ್ಟರಿಯಿಂದ ಲೆಟರ್ ತೆಗೆದುಕೊಂಡು ನಂತರ ಕಂಪನಿಯನ್ನು ಆರಂಭಿಸಬೇಕು. ಜುಬಿಲಂಟ್ ಕಾರ್ಖಾನೆಯ ಪಿ-52 ನಂಜನಗೂಡಿನ ಹೆಸರನ್ನು ಹಾಳು ಮಾಡಿದ್ದಾನೆ. ಅವನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡುವುದಕ್ಕಿಂತ ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು.