ಮೈಸೂರು : ಯಾರು ಯಾವಾಗ ಸಿಎಂ, ಡಿಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು. ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡ ಸಚಿವ ಕೃಷ್ಣ ಬೈರೇಗೌಡ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಆ ತೀರ್ಮಾನ ನಮ್ಮ ಕೈಯಲ್ಲಿ ಇರುವುದಿಲ್ಲ. ಹೀಗಾಗಿ ಈ ರೀತಿಯ ಚರ್ಚೆಗಳಿಂದ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೀಗಾಗಿ ಈ ರೀತಿಯ ವಿಚಾರಗಳು, ಹೇಳಿಕೆಗಳ ಚರ್ಚೆಗೆ ಅವಕಾಶ ಕೊಡಬೇಡಿ ಎಂದರು.
ಅವರಿಗೆ ಸೂಚನೆ ನೀಡುವ ಸ್ಥಾನದಲ್ಲಿ ನಾನಿಲ್ಲ. ಆದರೆ, ಈ ರೀತಿಯ ವಿಚಾರಕ್ಕಿಂತ ಅಭಿವೃದ್ಧಿ ವಿಚಾರಗಳ ಚರ್ಚೆ ಆಗಲಿ ಎಂಬುದಷ್ಟೇ ನನ್ನ ಮನವಿ ಹಾಗೂ ಸಲಹೆ ಎಂದು ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಕೆ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದರು. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆ. ಜನ ಬದಲಾವಣೆ ಬಯಸಿ ಸರ್ಕಾರ ತಂದಿದ್ದಾರೆ. ಇವತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ನಮ್ಮೆಲ್ಲರ ಗುರಿ ಏನೆಂದರೆ ಜನ ಯಾವ ನಿರೀಕ್ಷೆ ಇಟ್ಟುಕೊಂಡು ಇಲ್ಲಿ ಕೂರಿಸಿದ್ದಾರೋ ಅದನ್ನು ಈಡೇರಿಸುವುದು. ಜನರಿಗೆ ಒಳ್ಳೆಯ ರೀತಿಯ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಯಾರು ಯಾವಾಗ ಇವೆಲ್ಲವೂ ಕೂಡ ವರಿಷ್ಠರು, ನಮ್ಮ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಪಕ್ಷದಲ್ಲಿ ತೀರ್ಮಾನಿಸುತ್ತಾರೆ ಎಂದರು.
ಆದರೆ, ಇವತ್ತು ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಮುಖ್ಯ. ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ, ಅದೆಲ್ಲಕ್ಕಿಂತ ಜನರಿಗೆ ನಾವು ಅಧಿಕಾರದಲ್ಲಿ ಇರುವಾಗ ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ. ಹಾಗಾಗಿ ನಾವು ತಮ್ಮಲ್ಲಿ ಮನವಿ ಮಾಡುವುದು ನಿಮ್ಮ ಸಮಯ ಮತ್ತು ನಮ್ಮ ಸಮಯವನ್ನು ಜನಗಳ ಸಮಸ್ಯೆಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಟ್ಟರೆ ಜನರಿಗೆ ಅನುಕೂಲ ಆಗುತ್ತದೆ ಎಂದರು.
ಸೂಚನೆ ಕೊಡುವಷ್ಟು ನಾನು ದೊಡ್ಡವನಲ್ಲ : ನನ್ನ ವಿವೇಚನೆಗೆ ತಿಳಿದಿರುವುದನ್ನ ನಾನು ನಿಮ್ಮ ಜೊತೆಗೆ ಹಂಚಿಕೊಳ್ಳಬಹುದು. ನಿಮಗೆ ಕೇಳುವ ಹಕ್ಕಿದೆ. ನೀವು ಕೇಳಬಹುದು. ಅದನ್ನು ಬಿಟ್ಟು ಯಾರು ಏನು ಮಾತನಾಡಬೇಕು ಎಂದು ಸೂಚನೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ ಇರೋ ಸಮಯವನ್ನು ಸಾರ್ವಜನಿಕರ ಸಮಸ್ಯೆಗಳಿಗೆ ಗಮನ ಕೊಟ್ಟರೆ, ಸಾರ್ವಜನಿಕರ ಸಮಸ್ಯೆಗಳ ಕುರಿತು ನೀವು ನಮ್ಮಲ್ಲಿ ಪ್ರಶ್ನೆ ಮಾಡಿದರೆ, ನಾವು ಸಹ ಸಾರ್ವಜನಿಕರ ಪರವಾಗಿ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.