ಮೈಸೂರು:ದೇಶಕ್ಕೆ ಅಂಟಿರುವ ಕೊರೊನಾ ರೋಗದಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಮಹಾಮಾರಿಯನ್ನು ದೂರ ಮಾಡು ಎಂದು ಚಾಮುಂಡಿ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಷಾಢ ಶುಕ್ರವಾರ ಆದ್ದರಿಂದ ಚಾಮುಂಡೇಶ್ವರಿ ದರ್ಶನ ಪಡೆದು, ತಾಯಿಯ ಆಶೀರ್ವಾದ ಪಡೆದು ಬಂದಿದ್ದೇನೆ. ರಾಜ್ಯಕ್ಕೆ, ದೇಶಕ್ಕೆ, ಪ್ರಪಂಚಕ್ಕೆ ಈ ಕೊರೊನಾ ಒಂದು ಶಾಪವಾಗಿ ಪರಿಣಮಿಸಿದ್ದು, ಜನರಿಗೆ ಬಹಳ ತೊಂದರೆ ಕೊಡುತ್ತಿದೆ. ಈ ಕೊರೊನಾದಿಂದ ಮುಕ್ತಗೊಳಿಸು ಎಂದು ಚಾಮುಂಡಿ ತಾಯಿಯನ್ನು ಪ್ರಾರ್ಥಿಸಿದ್ದೇನೆ. ಕಳೆದ ವರ್ಷ ವಿಪರೀತ ಮಳೆಯಿಂದ ರಾಜ್ಯವೇ ಪ್ರವಾಹಕ್ಕೆ ತುತ್ತಾಗಿತ್ತು. ಅದನ್ನು ಸುಧಾರಿಸುವ ಶಕ್ತಿ ಕೊಟ್ಟವಳು ಚಾಮುಂಡಿ ತಾಯಿ, ಈ ಬಾರಿ ಕೊರೊನಾದಿಂದ ಮುಕ್ತಿಗೊಳಿಸಿ ಜನರಿಗೆ ನೆಮ್ಮದಿ ಕೊಡು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.