ಮೈಸೂರು: ಸಾರ್ವಜನಿಕರು ವಿವಿಧ ಕೆಲಸ, ಸೌಲಭ್ಯಗಳಿಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುವರು. ಆ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಮಾಡಬಾರದು. ಆಡಳಿತ ವರ್ಗ ಜನಸ್ನೇಹಿ ಆಡಳಿತ ನೀಡಬೇಕು. ಕಂದಾಯ ಆಡಳಿತ ವರ್ಗ ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ತರಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವ ಇಲಾಖೆ. ಜನಪರ ಆಡಳಿತ ನೀಡುವುದು ಮಾತೃ ಇಲಾಖೆ ಕಂದಾಯ ಇಲಾಖೆಯಿಂದ ಆರಂಭವಾಗಬೇಕು. ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ 30% ರಷ್ಟು ಮಳೆ ಕೊರತೆ ಆಗಿದೆ. ಮುಂದೆಯೂ ಮಳೆ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ರೈತರು ಹೆಚ್ಚು ನೀರು ಬೇಕಾಗುವ ಬೆಳೆಗಳನ್ನು ಬೆಳೆಯಬಾರದು ಎಂದು ಸಲಹೆ ನೀಡಿದರು.
ವಿಪತ್ತು ನಿರ್ವಹಣೆ ಪರಿಹಾರದಲ್ಲಿ ಅಕ್ರಮ: ಮಳೆಯಿoದ ಮಾನವ ಜೀವ ಹಾನಿ ಆಗಿದ್ದು, ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಪಾಯದ ಸ್ಥಳದಲ್ಲಿ ಇರುವವರನ್ನು ಬೇರೆಡೆಗೆ ಶಿಫ್ಟ್ ಮಾಡಿ ಪ್ರಾಣ ಹಾನಿ ಆಗದಂತೆ ತಡೆಗಟ್ಟಬೇಕು. ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕಾಲು ಸಂಕಗಳು ಹಾಗೂ ವೆಂಟೆಡ್ ಡ್ಯಾಮ್‌ಗಳನ್ನು ನಿರ್ಮಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಪತ್ತು ನಿರ್ವಹಣೆ ಪರಿಹಾರದಲ್ಲಿ ಅಕ್ರಮ ಆಗುತ್ತಿದ್ದು, ಅನರ್ಹರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬರ, ಪ್ರವಾಹ ಹಾಗೂ ಕೋವಿಡ್‌ಗೆ ಸಂಬಂಧಿಸಿದಂತೆ ಕ್ಯಾಲಾಮಿಟಿ ಫಂಡ್‌ನಲ್ಲಿ ಕೈಗೊಂಡಿರುವ ಕಾಮಗಾರಿಗಳು 4 ವರ್ಷಗಳಿಂದ ಬಾಕಿ ಉಳಿದಿವೆ. ಇದರಲ್ಲಿ ಬಾಕಿ ಇರುವುದಕ್ಕೆ ಗರಂ ಆದ ಸಚಿವರು, ಅದೇ ವರ್ಷದಲ್ಲಿ ಕಾಮಗಾರಿಗಳು ಮುಗಿಯಬೇಕು ಎಂದು ತಾಕೀತು ಮಾಡಿದರು.
ಭೂಮಿ ತಂತ್ರಾಂಶದಲ್ಲಿ ಬರುವ ಕಡತಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಸಕಾಲದಲ್ಲಿ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಿಳಂಬಕ್ಕೆ ಕಾರಣವಾದ ತಹಶೀಲ್ದಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಮಾಡಿದರು.