ಕರ್ನಾಟಕ

karnataka

ಕ್ರೀಡೆ ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರ: ಡಾ.ಹೆಚ್.ಸಿ. ಮಹದೇವಪ್ಪ

By ETV Bharat Karnataka Team

Published : Nov 2, 2023, 2:45 PM IST

State Level Inter Polytechnic Games: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮೈಸೂರಿನಲ್ಲಿ ಗುರುವಾರ ಚಾಮುಂಡಿ ವಿಹಾರ ಕ್ರಿಡಾಂಗಣದಲ್ಲಿ 44ನೇ ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಉದ್ಘಾಟಿಸಿದರು.

State Level Inter Polytechnic Games
ಕ್ರೀಡೆ ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರ: ಡಾ.ಹೆಚ್.ಸಿ. ಮಹದೇವಪ್ಪ

ಮೈಸೂರು:''ಕ್ರೀಡೆ ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರವಾಗಿದ್ದು, ಎಲ್ಲ ಸೀಮಾ ರೇಖೆಗಳನ್ನು ಮೀರಿ ಕ್ರೀಡೆಯನ್ನೇ ಒಂದು ಮನೋಧರ್ಮವಾಗಿ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ'' ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸರ್ಕಾರಿ ಸಿ.ಪಿ.ಸಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಗುರುವಾರ ಚಾಮುಂಡಿ ವಿಹಾರ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ 44ನೇ ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಈ ಅನಿಸಿಕೆ ವ್ಯಕ್ತಪಡಿಸಿದರು.

44ನೇ ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ

''ಮೈಸೂರಿನಲ್ಲಿ ಅದ್ಧೂರಿ ದಸರಾ ಕಾರ್ಯಕ್ರಮದ ನಂತರ ರಾಜ್ಯ ಮಟ್ಟದ ಅದ್ಧೂರಿ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಚಾರ ಎಂದ ಅವರು, ಕ್ರೀಡೆ ಎಂಬುದು ಮನುಷ್ಯನಿಗೆ ಅತ್ಯಂತ ಉತ್ಸಾಹದಾಯಕ ಕ್ಷೇತ್ರವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ಸದಾ ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಸ್ನೇಹ ಸಂಬಂಧಗಳನ್ನು ಹೊಂದಿರುತ್ತಾರೆ'' ಎಂದು ಅಭಿಪ್ರಾಯಪಟ್ಟರು.

''ವಿದ್ಯೆಯ ಜೊತೆಗೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಸಮತೋಲನತೆಯೆಡೆಗೆ ಕೊಂಡೊಯ್ಯಲು ಕ್ರೀಡೆ ಅತ್ಯುತ್ತಮ ಸಾಧನವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚರಿತ್ರೆಯನ್ನು ನಿರ್ಮಾಣ ಮಾಡುವಂತಹ ದೃಢಸಂಕಲ್ಪ ವಿದ್ಯೆ ಹಾಗೂ ಕ್ರೀಡೆ ಕೊಡುತ್ತಿದ್ದು, ಸಿಕ್ಕ ಅವಕಾಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯುವಂತಾಗಲಿ'' ಎಂದು ಮೈಸೂರು ಜಿಲ್ಲಾ ಸಚಿವರು ಆಶಿಸಿದರು.

44ನೇ ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ

ಶಾಸಕ ತನ್ವೀರ್ ಸೇಠ್ ಮಾತನಾಡಿ, ''ಜೀವನದ ಎಲ್ಲಾ ಹಂತಗಳಲ್ಲೂ ಮೌಲ್ಯ ಕುಸಿಯುತ್ತಿರುವ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಗುರುವಿನ ಮೌಲ್ಯ ಉಳಿದುಕೊಂಡಿದೆ. ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅದರಂತೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಬಹುಮುಖ್ಯವಾಗಿದೆ'' ಎಂದು ತಿಳಿಸಿದರು.

2,221 ವಿದ್ಯಾರ್ಥಿಗಳು ಭಾಗಿ:ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳ 97 ಕಾಲೇಜುಗಳಿಂದ ಆಗಮಿಸಿದ್ದ 2,221 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎಂ. ಸುರೇಶ್ ಕುಮಾರ್, ಜಂಟಿ ನಿರ್ದೇಶಕ ಜಿ. ಶ್ರೀಕಾಂತ್, ಉಪ ನಿರ್ದೇಶಕಿ ಎಸ್. ಮಂಜುಳಾ, ಸಹಾಯಕ ನಿರ್ದೇಶಕ ದೊಡ್ಡಮನಿ, ಅಭಿವೃದ್ದಿ ಅಧಿಕಾರಿ ಡಾ. ಮಾರುತಿ, ಸಿ.ಪಿ.ಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರಕಾಶ್ ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಡ್ರೋನ್ ಕ್ಯಾಮರಾದಲ್ಲಿ ಕುಂದಾನಗರಿ ರಾಜ್ಯೋತ್ಸವ ವೈಭವ ಸೆರೆ: 5 ಲಕ್ಷಕ್ಕೂ ಅಧಿಕ ಮಂದಿ ಭಾಗಿ- ವಿಡಿಯೋ

ABOUT THE AUTHOR

...view details