ಮೈಸೂರು: ನಿರ್ಮಾಪಕರು ನಮ್ಮ ಷರತ್ತಿಗೆ ಒಪ್ಪದಿದ್ದರೆ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಥಿಯೇಟರ್ ಓಪನ್ ಮಾಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಚೇರ್ಮನ್ ಆರ್.ಆರ್.ಓದುಗೌಡರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಚಿಕೆ ಸೂತ್ರಕ್ಕೆ ನಿರ್ಮಾಪಕರು ಒಪ್ಪಿಗೆ ಸೂಚಿಸದಿದ್ದರೆ ಯಾವ ಕಾರಣಕ್ಕೂ ಸಿಂಗಲ್ ಸ್ಕ್ರೀನ್ನಲ್ಲಿ ಸಿನಿಮಾ ರಿಲೀಸ್ ಮಾಡಲ್ಲ. ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವೆ ಚರ್ಚೆ ನಡೆದಿದೆ. ಯಾವೊಂದು ತೀರ್ಮಾನಕ್ಕೂ ಬರಲಾಗಿಲ್ಲ. ಆದರೆ, ನಿರ್ಮಾಪಕರೇ ಏಕಪಕ್ಷೀಯವಾಗಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು.
ತಮಿಳುನಾಡಿನಲ್ಲಿ 2,100, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 2,150, ಕೇರಳದಲ್ಲಿ 1,950 ಸಿಂಗಲ್ ಸ್ಕ್ರೀನ್ ಸಿನಿಮಾ ಥಿಯೇಟರ್ಗಳಿವೆ. ನಮ್ಮ ರಾಜ್ಯದಲ್ಲಿ 1,800 ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಿದ್ದವು. ಆದರೆ ಈಗ 589 ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಿವೆ. ನಿರ್ಮಾಪಕರು ಸಾಕಷ್ಟು ಬೇಡಿಕೆಗಳನ್ನು ಇಟ್ಟಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ನಮ್ಮ ಬೇಡಿಕೆಗೆ ಅವರು ಸ್ಪಂದಿಸಿದರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಓಪನ್ ಮಾಡುತ್ತೇವೆ. ಇಲ್ಲವಾದರೆ ಓಪನ್ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಚೇರ್ಮನ್ ಆರ್.ಆರ್.ಓದುಗೌಡರ್ ಗಾಯತ್ರಿ ಥಿಯೇಟರ್ ಮಾಲೀಕ ಎಂ.ಆರ್.ರಾಜರಾಮ್ ಮಾತನಾಡಿ, ಇಂತಹ ಸನ್ನಿವೇಶದಲ್ಲಿ ಥಿಯೇಟರ್ ನಡೆಸುವುದು ದುಸ್ತರವಾಗಿದೆ. ಖರ್ಚು ವೆಚ್ಚ ಭರಿಸಲಾಗುತ್ತಿಲ್ಲ. ಸಾಲ ಮಾಡಿ ಥಿಯೇಟರ್ ನಡೆಸಲಾಗುವುದಿಲ್ಲ. ನಿರ್ಮಾಪಕರು ಪ್ರದರ್ಶಕರ ಮಾತಿಗೆ ಒಪ್ಪದಿದ್ದರೆ ಥಿಯೇಟರ್ಗಳನ್ನು ವಾಣಿಜ್ಯ ಕಟ್ಟಡಕ್ಕೆ ಬಳಸಿಕೊಳ್ಳಲಾಗುವುದು ಎಂದರು.