ಮೈಸೂರು: ಇದುವರೆಗೂ ಮೈಸೂರಿನ 4 ಕ್ಷೇತ್ರಗಳಾದ ಕೆ.ಆರ್.ಕ್ಷೇತ್ರ, ಎನ್.ಆರ್.ಕ್ಷೇತ್ರ, ಚಾಮರಾಜ ಕ್ಷೇತ್ರ ಹಾಗೂ ಚಾಮುಂಡಿ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದಿದ್ದು, ಈ ಎಲ್ಲಾ ಕ್ಷೇತ್ರಕ್ಕೂ ಸಮಾನ ಮಹತ್ವವನ್ನು ಪ್ರಾಮಾಣಿಕವಾಗಿ ನೀಡಲಾಗುತ್ತಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕ್ಷೇತ್ರಕ್ಕೂ ಬೇಧ ಭಾವ ಮಾಡುತ್ತಿಲ್ಲ ಎಂದರು.
ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸಲು ಯಾರಿಗೂ ಆಗದಂತಹ ಪರಿಸ್ಥಿತಿ ಇಂದು ಬಂದಿದೆ. ಹೀಗಾಗಿಯೇ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಖಾಸಗಿ ಆಸ್ಪತ್ರೆಯವರೊಂದಿಗೆ 3 ಬಾರಿ ಸಭೆ ಮಾಡಿ ಅವರಿಗೆ ಸೂಚನೆ ನೀಡಲಾಗಿದ್ದು, ಶೇ 50 ರಷ್ಟು ಬೆಡ್ ನೀಡಬೇಕೆಂದು ಕೇಳಲಾಗಿದೆ ಎಂದರು.
ಮೈಸೂರಿನ ಆಸ್ಪತ್ರೆಗಳಿಗೆ ಕೇವಲ ಮೈಸೂರಿಗರಲ್ಲದೆ ನೆರೆಯ ಜಿಲ್ಲೆಯವರೂ ಸಹ ಬರುತ್ತಿದ್ದಾರೆ. ಬೆಂಗಳೂರು, ಚಾಮರಾಜನಗರ ಸೇರಿದಂತೆ ಇತರೆ ಜಿಲ್ಲೆಯ ಕೋವಿಡ್ ರೋಗಿಗಳು ತುರ್ತು ಪರಿಸ್ಥಿತಿಯಲ್ಲಿ ಬರುವ ಕಾರಣ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಆದಷ್ಟು ಬೇಗ ನಿಲ್ಲಿಸಬೇಕಾಗಿದೆ ಎಂದು ಹೇಳಿದರು.