ಮೈಸೂರು:ಎರಡನೇ ಅಲೆ ಕೋವಿಡ್ ಹೊಡೆತ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಅಂತ್ಯಕ್ರಿಯೆ ನಡೆಸುವುದೇ ಇದೀಗ ದೊಡ್ಡ ಸವಾಲಾಗಿದೆ. ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸರ್ವ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.
ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಹೇಗೆ ನಡೆಯುತ್ತಿದೆ? ದಿನೇ ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಸಾವಿನ ಪ್ರಕರಣಗಳು ಕೂಡ ವೇಗವಾಗಿ ಏರುತ್ತಿರೋದು ದುರಂತ. ಚಿಕಿತ್ಸೆಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ. ಇದರೆಲ್ಲದರ ನಡುವೆ ಇದೀಗ ಅಂತ್ಯ ಸಂಸ್ಕಾರ ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ. ಹೌದು, ಸಾವಿನ ಪ್ರರಣಗಳು ಹೆಚ್ಚಾದ ಕಾರಣ ಚಿತಾಗಾರ, ಸ್ಮಶಾನಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿರೋದು ಎಲ್ಲರಿಗೂ ತಿಳಿದಿರುವ ವಿಚಾರ.
ಮೈಸೂರಿನಲ್ಲಿ ಸೋಂಕಿತ ಪ್ರಕರಣಗಳು ಪ್ರತಿನಿತ್ಯ ಜಾಸ್ತಿಯಾಗುತ್ತಲೇ ಇದೆ. ಎರಡನೇ ಅಲೆಯ ಆರಂಭದಲ್ಲಿ 100 ಕೊರೊನಾ ಪ್ರಕರಣಗಳು ಹಾಗೂ 1-2 ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಕೇವಲ 20 ದಿನಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. 2,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಮೈಸೂರು ನಗರದಲ್ಲಿ ಪಾಲಿಕೆ ವತಿಯಿಂದ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕೆ ಆಯಾ ಧರ್ಮಗಳ ಅನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲು ಚಿತಾಗಾರಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿ ಅನಿಲ್ ಕ್ರೀಸ್ಟ ತಿಳಿಸಿದರು.
ಇದನ್ನೂ ಓದಿ:ಜಾನುವಾರುಗಳಿಗೆ ಹುಲ್ಲು ಕೀಳುತ್ತಿದ್ದವನ ಮೇಲೆ ಕಾಡುಹಂದಿ ಹಿಂಡು ದಾಳಿ
ವಿಜಯನಗರ 4ನೇ ಹಂತದ ಮುಕ್ತಿ ಧಾಮದಲ್ಲಿ 2 ವಿದ್ಯುತ್ ಚಿತಾಗಾರ, 1 ಅನಿಲ ಚಿತಾಗಾರ, ಜಯನಗರದ ಅನಿಲ ಚಿತಾಗಾರ ಇದರ ಜೊತೆಗೆ ಜೆ.ಪಿ. ನಗರದ ಜೋಡಿ ತೆಂಗಿನಮರದ ಹತ್ತಿರ 10 ಸ್ಲ್ಯಾಬ್ ಇರುವ ಕಟ್ಟಿಗೆ ಚಿತಾಗಾರವನ್ನು ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಮೃತದೇಹಗಳನ್ನು ಸಾಗಿಸಲು 4 ಆಂಬ್ಯುಲೆನ್ಸ್ ವಾಹನಗಳಿದ್ದು, ಒಂದೊಂದು ಆಂಬ್ಯುಲೆನ್ಸ್ ವಾಹನಕ್ಕೆ ಇಬ್ಬರು ಚಾಲಕರು ಇರುತ್ತಾರೆ. ಕೋವಿಡ್ ರೋಗಿಗಳು ಮೃತಪಟ್ಟ ತಕ್ಷಣ ಆಸ್ಪತ್ರೆಯಿಂದ ಕರೆ ಬರುತ್ತದೆ. ಆ ಕೂಡಲೇ ನಾವು ಆಂಬ್ಯುಲೆನ್ಸ್ನಲ್ಲಿ ಹೋಗಿ ಮೃತದೇಹವನ್ನು ತೆಗೆದುಕೊಂಡು ಬಂದು ಆಯಾ ಧರ್ಮದ ಅನುಸಾರ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟು ಅಂತ್ಯಕ್ರಿಯೆ ಮಾಡುತ್ತೇವೆ. ಈವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಸಮಸ್ಯೆಯಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಅನಿಲ್ ಕ್ರೀಸ್ಟ ತಿಳಿಸಿದರು.