ಕರ್ನಾಟಕ

karnataka

By

Published : Jan 19, 2022, 6:17 PM IST

ETV Bharat / state

ಜಿ.ಪಂ, ತಾ.ಪಂ.​ ಕ್ಷೇತ್ರ ವಿಂಗಡಣೆ ಅಧಿಕಾರ ಬದಲಾವಣೆ: ಆಕ್ಷೇಪಣೆ ಸಲ್ಲಿಸಲು 4 ವಾರ ಕಾಲಾವಕಾಶ

ಜಿಲ್ಲಾ ಪಂಚಾಯತ್​ ಹಾಗೂ ತಾಲೂಕು ಪಂಚಾಯತ್​ಗಳ ಗಡಿ ಮತ್ತು ಮೀಸಲು ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮತ್ತೆ ನಾಲ್ಕು ವಾರ ಕಾಲಾವಕಾಶ ನೀಡಿದೆ.

high-court-hearing-on-zilla-and-taluk-panchayats-boundaries-authority-issue
ಪಂಚಾಯಿತಿ ಕ್ಷೇತ್ರ ವಿಂಗಡಣೆ ಅಧಿಕಾರ ಬದಲಾವಣೆ ವಿಚಾರ

ಬೆಂಗಳೂರು : ಜಿಲ್ಲಾ ಪಂಚಾಯತ್​ ಹಾಗೂ ತಾಲೂಕು ಪಂಚಾಯತ್​ಗಳ ಗಡಿ ಮತ್ತು ಮೀಸಲು ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮತ್ತೆ ನಾಲ್ಕು ವಾರ ಕಾಲಾವಕಾಶ ನೀಡಿದೆ.

ಈ ಕುರಿತು ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹಿಂದಿನ ವಿಚಾರಣೆ ಸಂದರ್ಭದಲ್ಲಿಯೇ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದೆವು ಅಲ್ಲವೇ ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು ಉತ್ತರಿಸಿ, ಅರ್ಜಿಯಲ್ಲಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ಹೀಗಾಗಿ, ಅರ್ಜಿಗೆ ವಿವರವಾಗಿ ಆಕ್ಷೇಪಣೆ ಸಲ್ಲಿಸಬೇಕಿರುವುದರಿಂದ ಮತ್ತಷ್ಟು ಸಮಯಾವಕಾಶ ಅಗತ್ಯವಿದೆ ಎಂದರು.

ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್ ಫಣೀಂದ್ರ ವಾದ ಮಂಡಿಸಿ, ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಪಂಚಾಯತ್​ಗಳ ಅವಧಿ ಈಗಾಗಲೇ ಪೂರ್ಣಗೊಂಡಿದ್ದು, ಅವುಗಳಿಗೆ ಚುನಾವಣೆ ನಡೆಸಲು ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕ್ಷೇತ್ರ ವಿಂಗಡಣೆ ಹಾಗೂ ಮೀಸಲು ನಿಗದಿ ಅಂತಿಮಗೊಂಡ ಬಳಿಕ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದಾಗಿ ಆಯೋಗ ಚುನಾವಣೆಗಳನ್ನು ನಡೆಸಲು ಕೈಗೊಂಡಿರುವ ಎಲ್ಲ ಸಿದ್ಧತೆಗಳೂ ವ್ಯರ್ಥವಾಗಲಿವೆ ಎಂದು ವಿವರಿಸಿದರು.

ವಾದ ಆಲಿಸಿದ ಪೀಠ, ಮೊದಲು ಸರ್ಕಾರ ಆಕ್ಷೇಪಣೆ ಸಲ್ಲಿಸಲಿ. ನಂತರ ಈ ಎಲ್ಲ ಸಂಗತಿಗಳ ವಿಚಾರಣೆ ನಡೆಸೋಣ ಎಂದು ತಿಳಿಸಿ, ಅರ್ಜಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಗಡುವು ನೀಡಿ, ವಿಚಾರಣೆಯನ್ನು ಫೆ. 14ಕ್ಕೆ ಮುಂದೂಡಿತು.

ಇದನ್ನೂ ಓದಿ:ಬಂದ್ ನಡೆಸಿದವರಿಂದಲೇ ಸಾರ್ವಜನಿಕ ಆಸ್ತಿ ನಷ್ಟ ವಸೂಲಿ ವಿಚಾರ : ವಿವರ ಕೇಳಿದ ಹೈಕೋರ್ಟ್

ABOUT THE AUTHOR

...view details