ಮೈಸೂರು: ಮುಂದಿನ ಚುನಾವಣೆಯ ಒಳಗೆ ಬಾಂಬೆ ಡೇಸ್ ಪುಸ್ತಕ ಬಿಡುಗಡೆ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇಂದು ಕಾಡಾ ಕಚೇರಿಯಲ್ಲಿ ತಮ್ಮ ನೂತನ ಕಚೇರಿ ಉದ್ಘಾಟನೆ ಮಾಡಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಹೆಚ್. ವಿಶ್ವನಾಥ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಅಂಶಗಳನ್ನ ಒಳಗೊಂಡಿರುವ ಬಾಂಬೆ ಡೇಸ್ ಪುಸ್ತಕ ಮುಂದಿನ ವಿಧಾನಸಭಾ ಚುನಾವಣೆಯ ಒಳಗೆ ಬಿಡುಗಡೆ ಆಗಲಿದ್ದು, ಬಾಂಬೆ ಡೇಸ್ ಪುಸ್ತಕವನ್ನ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರೀತಿಯಲ್ಲಿ ಬಾಂಬೆ ಫೈಲ್ಸ್ ಎಂದು ಬದಲಾಯಿಸಿದ್ದು, ಅದು ವಾಸ್ತವ ಸತ್ಯಗಳ ಬಿಂಬವಾಗಿದೆ ಎಂದು ಹೇಳಿದರು.
ಹಳೇ ಪಠ್ಯವನ್ನೇ ಮುಂದುವರೆಸಿ: ಚಕ್ರತೀರ್ಥ ನೇತೃತ್ವದಲ್ಲಿ ಆಗಿರುವ ಪರಿಷ್ಕರಣೆ ಪಠ್ಯ ಪುಸ್ತಕ ವಿತರಣೆಯನ್ನು ಮಾಡಬೇಡಿ, ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಿ. ಅಕ್ಷರ ವಿಚಾರದಲ್ಲಿ ಸರ್ಕಾರ ಹಠ ಮಾಡಬಾರದು, ಪರಿಷ್ಕರಣೆ ಆಗಿರುವ ಪಠ್ಯ ಪುಸ್ತಕಕ್ಕೆ ರಾಜ್ಯಾದ್ಯಂತ ವಿರೋಧವಾಗಿದೆ. ಜನಾಭಿಪ್ರಾಯಕ್ಕೆ ಸರ್ಕಾರ ಮನ್ನಣೆ ಕೊಡಬೇಕು. ಈ ವಿಚಾರದಲ್ಲಿ ಸರ್ಕಾರ ಹಠ ಮಾಡಬಾರದು ಎಂದರು.
ಶಿಕ್ಷಣ ವಿಚಾರದಲ್ಲಿ ಶಿಕ್ಷಣ ಸಚಿವರು ಮಾತನಾಡಬೇಕು, ಈ ವಿಚಾರದಲ್ಲಿ ಕಂದಾಯ ಸಚಿವರು, ನಗರಾಭಿವೃದ್ಧಿ ಸಚಿವರು ಮಾತನಾಡುವುದು ಸರಿಯಲ್ಲ. ಸರ್ಕಾರ ಈ ಬಾರಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ರಚನೆಯಾದ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು, ಮುಂದಿನ ವರ್ಷ ಸಾಹಿತಿಗಳು, ತಜ್ಞರನ್ನು ಸೇರಿಸಿಕೊಂಡು ಒಂದು ಸಮಿತಿ ಮಾಡಿ ಪಠ್ಯ ಪುಸ್ತಕಗಳನ್ನ ಪರಿಷ್ಕರಣೆ ಮಾಡಬೇಕು ಎಂದು ಸರ್ಕಾರಕ್ಕೆ ವಿಶ್ವನಾಥ್ ಸಲಹೆ ನೀಡಿದರು.
ಮುಂದಿನ ಚುನಾವಣೆಯೊಳಗೆ 'ಬಾಂಬೆ ಫೈಲ್ಸ್' ಪುಸ್ತಕ ಬಿಡುಗಡೆ: ಹೆಚ್. ವಿಶ್ವನಾಥ್ ಮಹಾರಾಷ್ಟ್ರದ ಘಟನೆಗೆ ಅಲ್ಲಿನ ಸಿ.ಎಂ ಕಾರಣ:ಮಹಾರಾಷ್ಟ್ರದಲ್ಲಿ ಸರ್ಕಾರದ ಅಸ್ಥಿರತೆ ವಿಚಾರ ಕರ್ನಾಟಕದಲ್ಲಿ ಆಗಿದ್ದೇ ಅಲ್ಲೂ ಆಗುತ್ತಿದೆ. ಅಲ್ಲಿನ ಸಿಎಂ ಉದ್ಧವ್ ಠಾಕ್ರೆ ಅವರ ಸರ್ವಾಧಿಕಾರಿ ನಡವಳಿಕೆಗಳು ಈ ಘಟನೆಗೆ ಕಾರಣವಾಗಿದ್ದು, ಅಲ್ಲಿನ ಸಿಎಂ ಮಗನ ಆಡಳಿತ ಹಸ್ತಕ್ಷೇಪವು ಇದಕ್ಕೆ ಕಾರಣವಾಗಿದೆ. 2019 ರಲ್ಲಿ ಕರ್ನಾಟಕದಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ದರ್ಪ ದೌರ್ಜನ್ಯದಿಂದ ಕರ್ನಾಟಕದಲ್ಲಿ ಆದ ದಂಗೆ ಮಹಾರಾಷ್ಟ್ರದಲ್ಲೂ ಆಗುತ್ತಿದೆ. ಈ ಘಟನೆಗಳಿಗೆ ಬಿಜೆಪಿ ಕಾರಣ ಎಂದು ಹೇಳಲು ಆಗುವುದಿಲ್ಲ ಎಂದರು.
ಸಾಹಿತಿ ಭೈರಪ್ಪ ಪಕ್ಷದ ವಕ್ತಾರರಲ್ಲ:ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಈ ದೇಶ ಕಂಡ ದೊಡ್ಡ ಸಾಹಿತಿ. ಆದರೆ, ಅವರು ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಒಂದು ಪಕ್ಷದ ವಕ್ತಾರರ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಹಾಗೆ ಮಾತನಾಡಬಾರದು, ಅದು ಅವರಿಗೆ ಶೋಭೆ ತರುವುದಿಲ್ಲ ಎಂದ ವಿಶ್ವನಾಥ್, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ನಮಗೆ ಏನು ಬೇಕು ಎಂದು ಪ್ರಧಾನಿಯ ಬಳಿ ಬೆಂಗಳೂರು ಮತ್ತು ಮೈಸೂರಿನ ಜನಪ್ರತಿನಿಧಿಗಳು ಒಂದು ಮನವಿಯನ್ನು ಸಹಾ ಕೊಡಲು ಧೈರ್ಯ ತೋರಲಿಲ್ಲ, ಯಾಕೆ ಹೀಗೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಎರಡನೇ ಮಗುವೂ ಹೆಣ್ಣು.. ಮೊದಲನೇ ಮಗಳನ್ನು ಕತ್ತು ಹಿಸುಕಿ ಸಾಯಿಸಲು ಮುಂದಾದ ತಂದೆ!