ಮೈಸೂರು : ಸಿಎಂಗೆ ಕಣ್ಣು ಕಾಣಿಸೋದಿಲ್ಲ, ಕಿವಿನೂ ಕೇಳಿಸಲ್ಲ, ಪ್ರಸೆನ್ಸ್ ಆಫ್ ಮೈಂಡ್ ಇಲ್ಲ. ನಿಮ್ಮನ್ನ ಕಟ್ಟಿಕೊಂಡು ನಾವೇನು ಮಾಡೋಣ.
ಇದರಿಂದ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ ಎಂದು ಸಿಎಂ ವಿರುದ್ದವೇ ಹೆಚ್. ವಿಶ್ವನಾಥ್ ನೇರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣೆ ಬಗ್ಗೆ ಶಾಸಕರು, ಸಂಸದರ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಸಿಎಂ ವಿರುದ್ಧ ಕಿಡಿಕಾರಿದ ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್.. ಮುಖ್ಯಮಂತ್ರಿಗಳು ಬಳಿ ಹಲವಾರು ಖಾತೆಗಳನ್ನು ಇಟ್ಟುಕೊಂಡಿದ್ದಾರೆ. ಆ ಖಾತೆಗಳೆಲ್ಲಾ ಸತ್ತು ಹೋಗಿವೆ ಎಂದರ್ಥ. ಯಾಕೆಂದರೆ, ಬಿಬಿಎಂಪಿ, ಹಣಕಾಸು, ಇಂಧನ ಮುಂತಾದ ಹಲವಾರು ಖಾತೆಗಳು ಇದ್ದರೂ ಸಿಎಂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಿಬಿಎಂಪಿ ಸಹ ಸಿಎಂ ಬಳಿ ಇದ್ದರೂ ಅಲ್ಲಿ ಒಂದು ದಿನ ಸಭೆ ನಡೆಸಿಲ್ಲ. ದಿನಕ್ಕೊಬ್ಬ ಬಿಬಿಎಂಪಿ ಕಮಿಷನರ್ನನ್ನೂ ಬದಲಾವಣೆ ಮಾಡುತ್ತಾರೆ. ಅದರಲ್ಲಿ ಬಂದ ಗೌರವ್ ಗುಪ್ತಾ ಎಂಬ ಕಮಿಷನರ್ 10 ಪರ್ಸೆಂಟ್ ಗುಪ್ತ ಎಂದೇ ಪ್ರಸಿದ್ದಿ ಎಂದು ಆರೋಪಿಸಿದ್ದಾರೆ.
ಸುಧಾಕರ್ ಸ್ಥಿತಿ ದ್ರೌಪದಿ ತರ ಆಗಿದೆ:ಇನ್ನೂ ಆರೋಗ್ಯ ಸಚಿವ ಡಾ. ಸುಧಾಕರ್ ರಾಷ್ಟ್ರ ಮಟ್ಟದ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡು ಒಳ್ಳೆಯ ಕೆಲಸ ಮಾಡುತ್ತಿದ್ದರು. ಈಗ ಅವರ ಸ್ಥಿತಿ ದ್ರೌಪದಿ ವಸ್ತ್ರಾಪರಣ ಸ್ಥಿತಿಯಂತಾಗಿದೆ.
ಅವರ ಅಧಿಕಾರವನ್ನು ಕಿತ್ತುಕೊಂಡು ಶೆಟ್ಟರ್, ಅಶ್ವತ್ಥ್ ನಾರಾಯಾಣ್ಗೆ, ಆರ್ ಅಶೋಕ್ಗೆ ಕೊಟ್ಟಿದ್ದಾರೆ. ಇವತ್ತು ಸುಧಾಕರ್ ಹೆಲ್ತ್ ಮಿನಿಸ್ಟರ್ ಅಷ್ಟೇ.. ಯಾವುದೇ ಅಧಿಕಾರ ಇಲ್ಲ, ಪಾಪಾ ಎನ್ನಿಸುತ್ತದೆ ಎಂದಿದ್ದಾರೆ.
ಬಹಳ ದುರದೃಷ್ಟಕರ ಸಂಗತಿ ಎಂದರೆ ಚಾಮರಾಜನಗರದ ಡಿಸಿ 6 ಜನ ಹುಡುಗರನ್ನು ಇಟ್ಟುಕೊಂಡು ಧಿಕ್ಕಾರ ಕೂಗಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ಮೇಲೆ ಅಪಾದನೆ ಮಾಡಿದ್ದಾರೆ, ಇದು ಸರಿಯಲ್ಲ. ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದಾರೆ ಎಂದರು.
ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಮತ್ತು ಇಡೀ ಸರ್ಕಾರವೇ ವಿಫಲವಾಗಿದೆ. ಈಗಿನ ಪರಿಸ್ಥಿತಿಯಲ್ಲಿ 15 ದಿನವಾದರೂ ಕರ್ನಾಟಕವನ್ನು ಲಾಕ್ಡೌನ್ ಮಾಡಿ ಎಂದು ಸಲಹೆ ನೀಡಿದ್ದಾರೆ.