ಮೈಸೂರು: ಬಡವರ ಹಾಗೂ ದುರ್ಬಲ ವರ್ಗದವರಿಗೆ ಪ್ರಧಾನಿ ಮೋದಿ ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶಾಸಕ ರಾಮದಾಸ್ ಅವರ ಕಚೇರಿ ಸಮೀಪ ಏರ್ಪಡಿಸಿದ್ದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಎಸ್ವೈ, ಹೆಣ್ಣುಮಕ್ಕಳು ಬೆಳೆಯಬೇಕು, ಸ್ವತಂತ್ರವಾಗಿ ನಿಲ್ಲಬೇಕು ಎಂಬ ಆಲೋಚನೆಗಳು ಮೋದಿ ಅವರಿಗಿದೆ. ಅವರು ದೇಶ ಕಂಡ ಅಪ್ರತಿಮ ನಾಯಕ ಎಂದು ಗುಣಗಾನ ಮಾಡಿದರು.
ಏಳು ವರ್ಷಗಳಲ್ಲಿ ವಿಶ್ವದಲ್ಲಿಯೇ ದೇಶವನ್ನು ಮುಂಚೂಣಿಗೆ ಬರುವಂತೆ ಮಾಡಿದ್ದಾರೆ. ಅಲ್ಲದೆ ದೇಶ ರಕ್ಷಣೆ ಕುರಿತು ಬದ್ಧತೆ ಪ್ರದರ್ಶನ ಮಾಡಿದ್ದಾರೆ. ಬಡವರ ಹಾಗೂ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಹಲವು ಉತ್ತಮ ಯೋಜನೆಗಳನ್ನು ಮಾಡಿದ್ದಾರೆ. ಕೋವಿಡ್ ನಡುವೆಯೂ ಅಭಿವೃದ್ಧಿ, ಆರೋಗ್ಯ, ಮೂಲ ಸೌಕರ್ಯಕ್ಕಾಗಿ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.