ಮೈಸೂರು: ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಕಡಕೊಳ ಬಳಿ ನಡೆದ ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಎನ್.ಸತ್ಯನಾರಾಯಣ ಅವರ ವಿರುದ್ಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.27ರಂದು ಮೈಸೂರಿನಿಂದ ಬಂಡೀಪುರಕ್ಕೆ ತೆರಳುವಾಗ ಕಡಕೊಳ ಬಳಿ ಡಿವೈಡರ್‌ಗೆ ಗುದ್ದಿ ಕಾರು ಅಪಘಾತ ಸಂಭವಿಸಿತ್ತು. ಇದೀಗ ಕಾರು ಚಾಲಕ ಎನ್.ಸತ್ಯನಾರಾಯಣ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಕಲಂ 279 (ಅತಿಯಾದ ವೇಗ), 337 (ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಲೇ ಕಾರು ಅಪಘಾತಕ್ಕೀಡಾಗಿದೆ ಎಂದು ಬೆಂಗಾವಲು ಪಡೆಯ ಎಆರ್‌ಎಸ್ಐ ಎಸ್.ಮಹದೇವ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಪ್ರಧಾನಿ ಮೋದಿ: ಪಂಚಭೂತಗಳಲ್ಲಿ ಹೀರಾಬೆನ್ ಲೀನ
ಅಂದು ನಡೆದ ಕಾರು ಅಪಘಾತ: ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಬೆಂಗಳೂರಿನ ತಮ್ಮ ಸ್ನೇಹಿತನ ಎರಡು ಕಾರಿನಲ್ಲಿ ತಮ್ಮ ಕುಟುಂಬದವರೊಂದಿಗೆ ಬಂಡೀಪುರಕ್ಕೆ ಹೊರಟಿದ್ದರು. ಕಾರಿನಲ್ಲಿ ಮಗ ಮೇಹುಲ್ ಪ್ರಹ್ಲಾದ್ ಮೋದಿ(40) ಮತ್ತು ಸೊಸೆ ಜಿಂದಾಲ್ ಮೋದಿ (35), ಮೊಮ್ಮಗ ಮೇನಥ್ ಮೇಹುಲ್ ಮೋದಿ (6), ಡ್ರೈವರ್ ಸತ್ಯನಾರಾಯಣ(46) ಸೇರಿ ಐವರಿದ್ದರು. ಗಾಯಾಳುಗಳಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಲಾಗಿತ್ತು. ಚೇತರಿಸಿಕೊಂಡ ಬಳಿಕ ಎಲ್ಲರೂ ವಿಶೇಷ ವಿಮಾನದ ಮೂಲಕ ಅಹಮದಾಬಾದ್ಗೆ ತೆರಳಿದ್ದರು.
ಅಪಘಾತದಲ್ಲಿ ಚಾಲಕನ ತಪ್ಪಿಲ್ಲ. ಸ್ನೇಹಿತ ರಾಜಶೇಖರ್ ಅವರ ವಾಹನವಿದು. ನಾನು ಇಲ್ಲಿಗೆ ಬಂದಾಗ ಅವರ ಕಾರನ್ನೇ ಉಪಯೋಗಿಸಿಕೊಳ್ಳುತ್ತಿದ್ದೆ. ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಕಾರ್ನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದು, ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದು ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು.