ಮೈಸೂರು : ಜಮೀನಿನಲ್ಲಿ ಬೆಳೆ ಕಾವಲಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ಜಮೀನಿನಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಎಚ್ಡಿ ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ತಾಣದ ಬಳಿ ನಡೆದಿದೆ.
ಎಚ್ಡಿ ಕೋಟೆ ತಾಲೂಕಿನ ಮಾಸ್ತಿಗುಡಿ ಗ್ರಾಮದ ರೈತ ವಸಂತ (35) ಈತ ತನ್ನ ಜಮೀನಿನಲ್ಲಿ ಹಾಕಿದ್ದ ಮುಸುಕಿನ ಜೋಳವನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಲು ಕಾವಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಗುರುವಾರ ತಡರಾತ್ರಿ ಆಹಾರ ಅರಸಿ ನಾಗರಹೊಳೆ ಕಾಡಿನಿಂದ ಕಾಡಾನೆ ಬಂದಿದೆ. ಈ ಆನೆಯನ್ನು ಹಿಮ್ಮೆಟ್ಟಿಸಲು ಹೋದ ರೈತ ವಸಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ವಸಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು ಮಾಸ್ತಿಗುಡಿ ಹಾಡಿಯ ನಿವಾಸಿಗಳು ಹಾಗೂ ರೈತರು ಭೀಮನಹಳ್ಳಿಯ ಬಳಿ ರಸ್ತೆ ತಡೆದು, ಪ್ರತಿಭಟನೆ ನಡೆಸಿದ್ದರು. ಮೃತ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾಡು ಪ್ರಾಣಿಗಳು ಬರದಂತೆ ತಡೆಯಬೇಕು ಎಂದು ಆಗ್ರಹಿಸಿದ್ದರು.
ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಎಚ್ಡಿ ಕೋಟೆ ಪೋಲಿಸರು ದೌಡಾಯಿಸಿದ್ದರು. ರೈತರು ಪ್ರತಿಭಟನೆ ನಡೆಸದಂತೆ ಮನವೊಲಿಸಲು ಪೊಲೀಸರು ಯತ್ನಿಸಿದ್ದರು. ಈ ವೇಳೆ, ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆನೆ ದಾಳಿ ಕುರಿತು ಎಚ್ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಗ್ರಾಮದಲ್ಲಿ ಗಸ್ತು ಹೊಡೆದ ಕಾಡಾನೆ: ಚಾಲಕ, ನಿರ್ವಾಹಕ ಬಚಾವ್ -ವಿಡಿಯೋ
ಇತ್ತೀಚಿನ ಪ್ರಕರಣಗಳು - ಕಳೆದ ತಿಂಗಳಿನಲ್ಲಿ ರೈತನ ಮೇಲೆ ದಾಳಿ ನಡೆಸಿದ್ದ ಆನೆ:ಜಮೀನಿಗೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಹೆಚ್.ಡಿ.ಕೋಟೆ ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಸೆಪ್ಟೆಂಬರ್ 23ರ ಶನಿವಾರ ಸಂಜೆ ಘಟನೆ ನಡೆದಿದೆ. ಗ್ರಾಮದ ರೈತ ದಂಡನಾಯಕ ಗಾಯಗೊಂಡವರು. ಜಮೀನಿಗೆ ನೀರು ಹಾಯಿಸಲು ಹೋದಾಗ ಆನೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ತಕ್ಷಣ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರ್ಮಿಕನ ಮೇಲೆ ಕಾಡಾನೆ ದಾಳಿ:ಇತ್ತೀಚೆಗೆ ಕೊಡಗು ಜಿಲ್ಲೆಯ ಕಂಬಿಬಣೆ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಘಾಸಿಗೊಳಿಸಿತ್ತು. ಭೂತನಕಾಡು ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ರಾಮಸ್ವಾಮಿ ಎಂಬವರು ವೃಂದಾವನ ತೋಟದಲ್ಲಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಕಾಡಾನೆ ಪ್ರತ್ಯಕ್ಷವಾಗಿತ್ತು. ರಾಮಸ್ವಾಮಿ ಮೇಲೆರಗಿ ನೆಲಕ್ಕೆ ಬೀಳಿಸಿ ಕಾಲನ್ನು ತುಳಿಯಲಾರಂಭಿಸಿತ್ತು. ಅದೃಷ್ಟವಾಶಾತ್ ಅವರ ಹಿಂದೆ ಬರುತ್ತಿದ್ದ ತೋಟದ ರೈಟರ್ ಆನೆಯನ್ನು ಕಂಡು ಜೋರಾಗಿ ಬೊಬ್ಬಿಟ್ಟಿದ್ದರು. ಅವರ ಕಿರುಚಾಟಕ್ಕೆ ಕಾಡಾನೆ ರಾಮಸ್ವಾಮಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿತ್ತು.