ಮೈಸೂರು : ಚಿಕಿತ್ಸೆ ಫಲಕಾರಿಯಾಗದೇ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆ, ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಚ್.ಆರ್ ರಾಕೇಶ್(28) ಎಂಬವರು ತಲೆ ತಿರುಗುವಿಕೆ ಹಿನ್ನೆಲೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇವರ ಮೆದುಳು ನಿಷ್ಕ್ರಿಯಗೊಂಡಿದ್ದು ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ.
ಕಳೆದ ಜುಲೈ 23ರ ಸೋಮವಾರದಂದು ರಾಕೇಶ್ ಅವರನ್ನು ತಲೆ ತಿರುಗುವಿಕೆ (ಗಿಡ್ಡಿನೆಸ್) ಹಿನ್ನೆಲೆ ಇಲ್ಲಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ರಾಕೇಶ್ ಅವರನ್ನು ತಪಾಸಣೆ ನಡೆಸಿದ ವೈದ್ಯರಿಗೆ ಸಿಟಿ ಸ್ಕ್ಯಾನ್ನಲ್ಲಿ ಮೆದುಳಿಗೆ ಗಂಭೀರ ಗಾಯವಾಗಿರುವುದು ಗೊತ್ತಾಗಿದೆ. ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳ ಬಳಿಕ ಅಂದರೆ ಜುಲೈ 29ರಂದು ಇವರ ಮೆದುಳು ನಿಷ್ಕ್ರಿಯಗೊಂಡಿದೆ. ಈ ಸಂಬಂಧ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದು, ಅಂಗಾಂಗ ದಾನದ ಕುರಿತು ಸಮಾಲೋಚನೆ ನಡೆಸಿದ್ದಾರೆ. ಬಳಿಕ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ರಾಕೇಶ್ ಅವರ 2 ಕಿಡ್ನಿಗಳು, 1 ಲಿವರ್, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದ್ದು, ಈ ಮೂಲಕ ಐದು ಜನರಿಗೆ ಆಸರೆಯಾಗಿದ್ದಾರೆ.
ಅಂಗಾಂಗ ದಾನ ಶಿಷ್ಟಾಚಾರದ ಪ್ರಕಾರ, ಈ ಹಿಂದೆ ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕತೆಯ ಕಾರ್ಯಕ್ರಮದ ಅಧಿಕಾರಿಗಳು “ಅಂಗ ಸ್ವೀಕರಿಸುವವರ ಕಾಯುವ ಪಟ್ಟಿ” ಪ್ರಕಾರದಂತೆ ಮುಂದಿನ ಪ್ರಕ್ರಿಯೆ ಕೈಗೊಂಡರು. ಭಾನುವಾರ ರಾಕೇಶ್ ಅವರ ಅಂಗಾಂಗಗಳಾದ ಎರಡು ಕಿಡ್ನಿಗಳು, ಒಂದು ಲಿವರ್ ಮತ್ತು ಹೃದಯದ ಕವಾಟಗಳು ಹಾಗೂ ಕಾರ್ನಿಯಾಗಳನ್ನು ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಕ್ರಾಸ್ ಕ್ಲ್ಯಾಂಪ್ ಮಾಡಲಾಯಿತು.