ಮೈಸೂರು: ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಆಗಸ್ಟ್ 1ರಿಂದ ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನ ನಿರ್ಬಂಧದ ಆದೇಶ ಹೊರಡಿಸಿರುವ ಹೆದ್ದಾರಿ ಪ್ರಾಧಿಕಾರದ ನಿರ್ಧಾರ ಸರಿ ಇದೆ. ಏಕೆಂದರೆ ಇಲ್ಲಿಯ ವರೆಗೆ ಹೆದ್ದಾರಿ ಅಪಘಾತದಲ್ಲಿ ಸಾವನ್ನಪ್ಪಿದ ಬಹುತೇಕ ಬೈಕ್ ಸವಾರರಾಗಿದ್ದು, ಕಡಿಮೆ ಸಿಸಿಯ ವಾಹನಗಳು ಹೆದ್ದಾರಿಯಲ್ಲಿ ವೇಗದಲ್ಲಿ ಹೋದರೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ನಿರ್ಬಂಧ ಸರಿಯಿದೆ ಎಂದು ಸಂಚಾರಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇಂದು ಮೈಸೂರು ನಗರ ಪೋಲಿಸ್ ಕಮಿಷನರ್ ಕಚೇರಿಯಲ್ಲಿ ನಗರದ ಸಂಚಾರಿ ವಿಭಾಗದ ಅಧಿಕಾರಿಗಳು, ಆರ್ ಟಿ ಒ ಅಧಿಕಾರಿಗಳು ಹಾಗೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ 150 ಸಿಸಿ ವಾಹನಗಳು ಹೆಚ್ಚಿನ ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಅದರಲ್ಲಿ ಬೈಕ್ ಹಾಗೂ ತ್ರಿ ಚಕ್ರ ವಾಹನಗಳು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಈ ನಿರ್ಬಂಧ ಹೇರಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ದರೋಡೆ ಪ್ರಕರಣದ ಒಂದೇ ಒಂದು ದೂರು ದಾಖಲಾಗಿಲ್ಲ : ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ತಡೆಗೋಡೆಗೆ ಅಳವಡಿಸಿರುವ ಕಬ್ಬಿಣ ಸೇರಿದಂತೆ ಇತರ ವಸ್ತುಗಳು ಕಳ್ಳತನ ಮಾಡಲಾಗುತ್ತಿದೆ ಎಂಬ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಕಳ್ಳತನ ಪ್ರಕರಣದ ಬಗ್ಗೆ ಇಲ್ಲಿಯವರೆಗೆ ಹೆದ್ದಾರಿ ಅಧಿಕಾರಿಗಳು ಒಂದೇ ಒಂದು ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ಕ್ರಮ ವಹಿಸುತ್ತೇವೆ. ಹೆದ್ದಾರಿಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ದರೋಡೆ ಪ್ರಕರಣವೂ ನಡೆದಿಲ್ಲ. ಆದರೆ, ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳಲ್ಲಿ ಎರಡು ದರೋಡೆ ಪ್ರಕರಣ ನಡೆದಿದ್ದು. ಈ ಬಗ್ಗೆ ನಮ್ಮ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
25 ಅಪಘಾತ ವಲಯ: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಕಾಮಗಾರಿ ಇನ್ನೂ ಸಂಪೂರ್ಣ ಪೂರ್ಣವಾಗಿಲ್ಲ. ಹೆದ್ದಾರಿಯಲ್ಲಿ ಸುಮಾರು 25 ಅಪಘಾತ ವಲಯಗಳಿದ್ದು, ಎಲ್ಲ ಕಡೆ ನಾನೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕೆಲವು ಕಾಮಗಾರಿಗಳು ಬಾಕಿ ಇವೆ. ಜೊತೆಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಬಾಕಿ ಇದೆ ಹಾಗೂ ಸೂಚನಾ ಫಲಕಗಳ ಅಳವಡಿಕೆ ಕೆಲವು ಕಡೆ ಬಾಕಿ ಇದ್ದು. ಆದರೆ ವೇಗದ ಮಿತಿ ಬಗ್ಗೆ ನಾಮ ಫಲಕಗಳನ್ನು ಅಳವಡಿಸಲಾಗಿದೆ.
ಈಗ ಬಾಕಿ ಇರುವ ಕಾಮಗಾರಿಗಳಿಗೆ ಹೆದ್ದಾರಿ ಅಧಿಕಾರಿಗಳು ಹೆಚ್ಚಿನ ಅನುದಾನ ತಂದು ಕೆಲಸ ಮಾಡಬೇಕಾಗಿದ್ದು. ಹೆದ್ದಾರಿಯ ಅಧಿಕಾರಿಗಳು ಪೋಲಿಸರನ್ನು ಕೇಳಿ ಕಾಮಗಾರಿ ಮಾಡಿಲ್ಲ. ಸಮಸ್ಯೆ ಆದಾಗ ಮಾತ್ರ ನಮ್ಮನ್ನು ಕರೆಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಉತ್ತರಿಸಿದರು.