ಮೈಸೂರು:ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಹುಚ್ಚು ಹೊಳೆಯಲ್ಲಿ ಎಲ್ಲವೂ ಕೊಚ್ಚಿಹೋದವು. ಇದು ಮೈಸೂರು ಜಿಲ್ಲೆಯಲ್ಲಿಯೂ ಸಹ ಆಗಿದೆ. ಜೆಡಿಎಸ್ನ ಕಾರ್ಯಕರ್ತರು ಪಕ್ಷದ ಕೈ ಬಿಟ್ಟಿಲ್ಲ. ಆದರೆ, ನಮಗೆ ನಿರೀಕ್ಷಿತ ಮತ ಸಿಕ್ಕಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಯುಕ್ತ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಕ್ಷೇತ್ರದ ಧನ್ಯತಾ ಸಮಾಗಮಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಕೆಲವರೂ ನನ್ನ ವಿರುದ್ದ ಏಕ ವಚನದಲ್ಲೇ ಮಾತನಾಡುತ್ತಾರೆ. ಚಾಮುಂಡೇಶ್ವರಿಯಲ್ಲಿ ಅಪ್ಪ ಮಗನನ್ನ ಸೋಲಿಸುವುದೇ ನನ್ನ ಗುರಿ ಎಂದು ಹೇಳಿದ್ದರು. ಈಗ ಕ್ಷೇತ್ರದ ಜನರೇ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಜೆಡಿಎಸ್ನಿಂದ ಸ್ಪರ್ಧೆ ಮಾಡಿದಾಗ ಅವರು ಜೇಬಿನಿಂದ ಒಂದು ರೂಪಾಯಿ ಹಾಕಿರಲಿಲ್ಲ. ನಾವುಗಳೇ ಕ್ಷೇತ್ರವನ್ನ ಹಂಚಿಕೊಂಡು ಪ್ರಚಾರ ಮಾಡಿ ಗೆಲ್ಲಿಸಿದ್ದೆವು. 2013ರಲ್ಲಿ ವರುಣಾದಿಂದ ನಿಂತು ಗೆದ್ದರು. ಆದರೆ, 2018ರಲ್ಲಿ ಅವರು ಯಾರದ್ದೋ ಮಾತು ಕೇಳಿ ಚಾಮುಂಡೇಶ್ವರಿಗೆ ಬಂದರು. ಆದರೆ, ಅಂದು ಅವರು ಚಾಮುಂಡೇಶ್ವರಿಗೆ ಬರದೇ ವರುಣಾದಲ್ಲೇ ನಿಂತಿದ್ದರೇ ಅವರೇ ಸಿಎಂ ಆಗುತ್ತಿದ್ದರು ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು, ಬಿಜೆಪಿಯವರು ಕುತಂತ್ರ ಮಾಡಿದರು. ಬಿಜೆಪಿ ಜೊತೆ ಜೆಡಿಎಸ್ ಸೇರಲಿಲ್ಲ ಎಂದು ದ್ವೇಷದ ರಾಜಕೀಯಕ್ಕೆ ಮುಂದಾದರು, ಇದೆಲ್ಲ ಸಾಲದು ಎಂದು ಪ್ರಧಾನಿ, ಗೃಹ ಮಂತ್ರಿ, ನಾನಾ ನಾಯಕರು ಬಂದು ಹೋದರು. ಆದರೆ, ಇವರು ಗೆದ್ದಿದ್ದು ಮಾತ್ರ ಒಂದು ಕ್ಷೇತ್ರ. ಹಿಜಾಬ್, ಹಲಾಲ್ ಕಟ್ ಅದು ಇದು ಅಂತ ಎಷ್ಟು ಗೊಂದಲ ಸೃಷ್ಟಿ ಮಾಡಿದ್ರಿ?. ಈ ಗೊಂದಲಗಳಿಂದ ಅಭಿವೃದ್ಧಿ ಸಾಧ್ಯವಾ? ಮೊದಲು ಜನರ ಸೇವೆ ಮಾಡಿ ಎಂದು ಬಿಜೆಪಿ ವಿರುದ್ಧ ಕುಟುಕಿದರು.