ಮೈಸೂರು: ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡದಿರುವುದು ಸಹಜವಾಗಿಯೇ ಬೇಸರ ತಂದಿದೆ ಎಂದು ಮೈಸೂರಿನಲ್ಲಿ ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದರು.
ಇಂದು ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಆಗಮಿಸಿ ತಾಯಿಯ ದರ್ಶನ ಪಡೆದ ನಂತರ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದೆ. ಆದರೆ, ನಾಯಕರುಗಳು ರಾಜೀನಾಮೆ ನೀಡುವುದು ಬೇಡ ಎಂದರೂ ನಾನೇ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ನೀಡಿದ್ದೆ. ಈಗ ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಮಂತ್ರಿಯಾಗುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ ಇನ್ನೂ ಸಚಿವ ಸ್ಥಾನ ನೀಡದಿರುವುದು ಸಹಜವಾಗಿಯೇ ಬೇಸರ ತಂದಿದೆ. ಆದರೂ ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ಎಲ್ಲವನ್ನು ನೀಡಿದೆ. ನನಗೆ ಮಂದಿ ನೋವು ಇದ್ದ ಕಾರಣ ಅಧಿವೇಶನದಲ್ಲಿ ಭಾಗವಹಿಸಿಲ್ಲ. ಈಗ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ, ಸೋಮವಾರದಿಂದ ಅಧಿವೇಶನದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಈಶ್ವರಪ್ಪಗೆ ಸಿಎಂ ಕ್ಲೀನ್‌ಚಿಟ್ ಕೊಟ್ಟಿರುವಾಗ ಪಾರದರ್ಶಕ ತನಿಖೆ ಹೇಗೆ ಸಾಧ್ಯ?: ಪರಿಷತ್ ಸದಸ್ಯ ಚನ್ನರಾಜ್
ಡಿ ಕೆ ಶಿವಕುಮಾರ್ ಹೇಳಿಕೆ ಸರಿಯಲ್ಲ: ನಾನು ಭಾರತ್ ಜೋಡೋ ಹಾಗೂ ವಿಧಾನ ಮಂಡಲ ಅಧಿವೇಶನದಲ್ಲಿ ಇರುವಾಗಲೇ ಇಡಿ ನೋಟಿಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ ಎಂದು ಡಿ.ಕೆ.ಶಿವಕುಮಾರ್ ಹೇಳಿರುವುದು ಸರಿಯಲ್ಲ. ನೀವು ಈಗಾಗಲೇ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಇದ್ದೀರಿ. ನೀವು ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿ ಹೇಳಿಕೆಯನ್ನು ನೀಡಬಾರದು. ಜೊತೆಗೆ, ನೀವು ಇಂಧನ ಸಚಿವರಾಗಿದ್ದ ಸಂದರ್ಭದ ಕಡತಗಳನ್ನು ಕೊಡುವಂತೆ ಅಧಿಕಾರಿಗಳು ಕರೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯು ಸಹಾ ಸರಿಯಲ್ಲ. ಅವುಗಳು ಸಾರ್ವಜನಿಕರ ಕಡತಗಳಾಗಿದ್ದು, ಯಾರು ಬೇಕಾದರೂ ಆರ್.ಟಿ.ಐ ದಾಖಲೆ ಸಲ್ಲಿಸಿ ಪಡೆದುಕೊಳ್ಳಬಹುದು ಎಂದರು.