ಮೈಸೂರು: ಹುಣಸೂರಿನ ಚಿಕ್ಕ ಬೀಚನಹಳ್ಳಿಯಲ್ಲಿ ಮಹಿಳೆಯನ್ನು ಬಲಿ ಪಡೆದು, ಇಬ್ಬರನ್ನು ಗಾಯಗೊಳಿಸಿದ ವಕ್ರದಂತ ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಹೆಚ್ಚಿನ ಅಪಾಯ ತಪ್ಪಿಸಿದೆ. ಈ ಪುಂಡಾನೆಯನ್ನು ಅರಣ್ಯ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ದುಬಾರೆ ಆನೆ ಕ್ಯಾಂಪಿನ ಕ್ರಾಲ್‌ನಲ್ಲಿ ಬಂಧಿಯಾಗಿಸಿ, ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ.
ಬಿಳಿಕೆರೆ ಬಳಿಯ ಅರಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಎರಡು ಸಲಗಗಳ ಸೆರೆ ಹಿಡಿಯಲು ಅಭಿಮನ್ಯು, ಭೀಮಾ, ಮಹೇಂದ್ರ, ಗಣೇಶ ಮತ್ತು ಪ್ರಶಾಂತ ಸಾಕಾನೆಗಳೊಂದಿಗೆ ಮುಂಜಾನೆಯೇ ಆಗಮಿಸಿದ್ದ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಹಾಗೂ ಎಲಿಫೆಂಟ್ ಟಾಸ್ಕ್ಪೋರ್ಸ್ನ ಮುಖ್ಯಸ್ಥೆ ಸೀಮಾ ನೇತೃತ್ವದ ತಂಡ. ತಕ್ಷಣವೇ ಸಾಕಾನೆಗಳೊಂದಿಗೆ ಸ್ಥಳಕ್ಕಾಗಮಿಸಿ ಪುಂಡಾನೆಯನ್ನು ಸೆರೆ ಹಿಡಿಯಲು ಮುಂದಾದರು. ಈ ವೇಳೆ, ಅಕ್ಕ-ಪಕ್ಕದ ಗ್ರಾಮದ ಸಾವಿರಾರು ಮಂದಿ ಸ್ಥಳದಲ್ಲಿ ನೆರೆದು, ಸಲಗವನ್ನು ಅಟ್ಟಾಡಿಸುತ್ತಿದ್ದರು. ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಆನೆ ಸೆರೆ ಹಿಡಿಯಲು ಕಾರ್ಯಚರಣೆ ಆರಂಭಿಸಿದರು.
ಓಡಾಡಿಸಿದ ಪುಂಡಾನೆ :ಸಾಕಾನೆಗಳನ್ನು ಕಂಡ ಸಲಗ ಚಿಕ್ಕಬೀಚನಹಳ್ಳಿ, ದೊಡ್ಡಬೀಚನಹಳ್ಳಿ, ಹಳ್ಳದಮನುಗನಹಳ್ಳಿಯ ಜಮೀನುಗಳಲ್ಲಿ ಅಡ್ಡಾಡುತ್ತಾ ಆಟವಾಡಿಸಿತು. ಇತ್ತ ಜನರಂತೂ ಕೇಕೆ ಹಾಕುತ್ತಾ, ಮುನ್ನುಗ್ಗುತ್ತಿದ್ದರಿಂದ ಕಾರ್ಯಾಚರಣೆಗೆ ಅಡಚಣೆಯಾಗುತ್ತಿತ್ತು. ಅರಣ್ಯ ಸಿಬ್ಬಂದಿ ಅತ್ತಿಂದಿತ್ತ ಜನರ ನಡುವೆಯೇ ಓಡಾಡುತ್ತಲೇ ಅರವಳಿಕೆ ಚುಚ್ಚುಮದ್ದು ನೀಡುವ ಪ್ರಥಮ ಪ್ರಯತ್ನ ವಿಫಲವಾಯಿತಾದರೂ ಮಧ್ಯಾಹ್ನ ೨.೩೦ರ ವೇಳೆಗೆ ಎಚ್.ಡಿ.ಕೋಟೆ ತಾಲೂಕಿನ ಹಳ್ಳದ ಮನುಗನಹಳ್ಳಿಯ ವಾಸುರವರ ತೋಟದಲ್ಲಿ ಅರವಳಿಕೆ ಚುಚ್ಚುಮದ್ದಿನಿಂದ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು.
ಎಸ್ಪಿ ನೇತೃತ್ವ : ಸ್ಥಳಕ್ಕಾಗಮಿಸಿದ ಎಸ್ಪಿ ಸೀಮಾ ಲಟ್ಕರ್, ಎ.ಎಸ್.ಪಿ ಬಿ.ಎನ್.ನಂದಿನಿ, ಡಿವೈಎಸ್‌ಪಿ ಮಹೇಶ್ ಹಾಗೂ ಪೊಲೀಸ್ ಸಿಬ್ಬಂದಿ ರಸ್ತೆಯನ್ನು ಬಂದ್ ಮಾಡಿಸಿ ಜನರನ್ನು ನಿಯಂತ್ರಿಸಿದ್ದರಿಂದ ಸೆರೆಯ ಕಾರ್ಯಾಚರಣೆ ನಡೆಸಲು ಸಹಕಾರಿಯಾಯಿತು. ಪ್ರಜ್ಞೆ ತಪ್ಪಿದ ಸಲಗನನ್ನು ಆರೈಕೆ ಮಾಡಿ, ಹಗ್ಗದಿಂದ ಬಿಗಿದು ಸಾಕಾನೆಗಳ ಸಹಾಯದಿಂದ ಸುಮಾರು 300 ಮೀಟರ್‌ನಷ್ಟು ಪುಂಡಾನೆಯ ಹೆಡೆಮುರಿ ಕಟ್ಟಿ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು. ಈ ವೇಳೆ, ನೆರೆದಿದ್ದ ಸಾರ್ವಜನಿಕರು ಆನೆ ಸೆರೆ ಕಾರ್ಯಾ ಚರಣೆಯನ್ನು ಕಣ್ತುಂಬಿಕೊಂಡು ಆನೆ ಸೆರೆಯಾಯಿತ್ತಲ್ಲ ಎಂದು ನಿಟ್ಟುಸಿರುಬಿಟ್ಟರು.