ಕರ್ನಾಟಕ

karnataka

ETV Bharat / state

ಸಂಸದ ಪ್ರತಾಪಸಿಂಹರನ್ನು ತನಿಖೆಗೆ ಒಳಪಡಿಸಬೇಕು: ಡಾ ಯತೀಂದ್ರ ಸಿದ್ದರಾಮಯ್ಯ - ಸಾಗರ ಶರ್ಮ

ಸಂಸತ್​ನಲ್ಲಿ ಭದ್ರತಾ ಲೋಪ ಆಗಿದೆ. ಈ ಘಟನೆ ಹಿಂದೆ ಬೇರೆಯದ್ದೇ ಹುನ್ನಾರ ಇದೆ ಎಂದು ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಡಾ ಯತೀಂದ್ರ ಸಿದ್ದರಾಮಯ್ಯ
ಡಾ ಯತೀಂದ್ರ ಸಿದ್ದರಾಮಯ್ಯ

By ETV Bharat Karnataka Team

Published : Dec 14, 2023, 6:57 PM IST

Updated : Dec 14, 2023, 7:16 PM IST

ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಸಂಸತ್ ಆವರಣದಲ್ಲಿ ಬುಧವಾರ ನಡೆದಿರುವ ದಾಳಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ ಎಂದು ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಪಾರ್ಲಿಮೆಂಟ್ ಮೇಲೆ ದಾಳಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಸತ್​ನಲ್ಲಿ ಭದ್ರತಾ ಲೋಪ ಆಗಿದೆ. ಈ ಘಟನೆ ಹಿಂದೆ ಬೇರೆಯ ಹುನ್ನಾರ ಇದೆ. ಸಂಸತ್ ಮೇಲೆ ಅಟ್ಯಾಕ್ ಮಾಡಿದ ಓರ್ವ ಮೈಸೂರಿನವನು. ಸಂಸತ್ ಒಳಗೆ ನುಗ್ಗಿರುವವರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಹೋಗಿದ್ದಾರೆ. ಪ್ರತಾಪ್ ಸಿಂಹ ಅವರೇ ಯಾಕೆ ಅವರನ್ನ ಕಳುಹಿಸಿರಬಾರದು? ಎಂದು ಪ್ರಶ್ನಿಸಿದರು.

ನಾವು ಸಹ ವಿಧಾನಸಭಾ ಅಧಿವೇಶನ ವೀಕ್ಷಣೆಗೆ ಪಾಸ್ ನೀಡುತ್ತೇವೆ. ಪಾಸ್ ನೀಡುವ ವೇಳೆ ಸಂಪೂರ್ಣವಾಗಿ ಪರಿಶೀಲಿಸಿ ನಂತರ ಪಾಸ್ ನೀಡುತ್ತೇವೆ. ಹಾಗಾಗಿ ಆ ವ್ಯಕ್ತಿಗಳಿಗೂ ಪ್ರತಾಪ್ ಸಿಂಹರಿಗೂ ಪರಿಚಯವಿರುತ್ತೆ. ಕೂಡಲೇ ಅವರನ್ನ ತನಿಖೆಗೆ ಒಳಪಡಿಸಬೇಕು. ಲೋಕಸಭಾ ಚುನಾವಣೆ ವೇಳೆ ಇಂತಹ ಘಟನೆ ನಡೆಯುತ್ತಿರುವುದರ ಹಿಂದೆ ಬೇರೊಂದು ಹುನ್ನಾರ ಇದ್ದೇ ಇರುತ್ತೆ ಎಂದರು.

ಅಂಧ ಭಕ್ತರು ಯಾವ ರೀತಿ ಇರುತ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ- ಬಿ ಕೆ ಹರಿಪ್ರಸಾದ್ :ಫೇಕ್ ಅಂಧ ಭಕ್ತರು ಯಾವ ರೀತಿ ಇರ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ ಎಂದು ಕಾಂಗ್ರೆಸ್ ಎಂಎಲ್​ಸಿ ಬಿ ಕೆ ಹರಿಪ್ರಸಾದ್ ಅವರು ವಾಗ್ದಾಳಿ ನಡೆಸಿದ್ದಾರೆ.

ಸಂಸತ್​ನಲ್ಲಿ ಭದ್ರತಾ ಲೋಪದ ವಿಚಾರವಾಗಿ ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸುತ್ತಾ, ನಿನ್ನೆ ಮೈಸೂರಿನ ಮನೋರಂಜನ್​ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನ ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ. ಫೇಕ್ ಅಂಧಭಕ್ತರು ಯಾವ ರೀತಿ ಇರ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ. ರಾಷ್ಟ್ರದ ಪ್ರಖ್ಯಾತಿಗೆ ಕಪ್ಪು ಬಣ್ಣ ಬಳಿದಿದ್ದಾರೆ ಎಂದು ಕಿಡಿ ಕಾರಿದರು.

ವಿಶ್ವಗುರು ಆಡಳಿತ ವೈಫಲ್ಯವನ್ನು ಇಡಿ ವಿಶ್ವವೇ ನೋಡಿದೆ. ಆದ್ದರಿಂದ ವಿಶ್ವಗುರು ಇದರ ಹೊಣೆ ಹೊರಬೇಕಾಗುತ್ತದೆ.‌ ಡಿಸೆಂಬರ್ 13 ರಂದು ಯೋಧರು, ಪೊಲೀಸರು ಪಾರ್ಲಿಮೆಂಟ್ ರಕ್ಷಣೆ ಮಾಡಿದ ದಿನ. ಇವರೆಲ್ಲ ಅಂತಹ ದಿನಾನೇ ಹುಡುಕಾತ್ತಾರೆ‌. ಡಿಸೆಂಬರ್ 6, ಬುದ್ದ ಹುಟ್ಟಿದ ದಿನಗಳನ್ನೆ ಇವರು ಹುಡುಕುತ್ತಾರೆ. ಮನೋರಂಜನ್ ಹಿನ್ನೆಲೆಯನ್ನ ಕರ್ನಾಟಕ ರಾಜ್ಯದ ಪೊಲೀಸರು ತನಿಖೆ ಮಾಡಬೇಕು. ಸಂಪೂರ್ಣ ತನಿಖೆಯನ್ನ ಮಾಡಬೇಕು ಎಂದು ಆಗ್ರಹಿಸಿದರು.

ಕೆಲವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಎರಡನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. 75 ವರ್ಷಗಳಲ್ಲಿ ನಾವು ಪಾಸ್ ಕೊಟ್ಟಿದ್ದೇವೆ. ಅವರೆಲ್ಲರೂ ಹೀಗೆ ಮಾಡಿದ್ದಾರಾ?. ಯಾಕೆಂದರೆ ವಿಶ್ವಗುರು ಆಗಾಗ ಸಂಶೋಧನೆ ಮಾಡಿ ಅಂಧಭಕ್ತರಿಗೆ ಪಾಠ ಮಾಡ್ತಾ ಇರ್ತಾರೆ. ಮೋರಿಯಲ್ಲಿ ಪೈಪ್ ಹಾಕಿ ಗ್ಯಾಸ್ ಕಂಡುಹಿಡಿದಿದ್ದು ಇದೇ ವಿಶ್ವಗುರು. ಅದರ ಮೂಲಕ ಗ್ಯಾಸ್ ಪ್ರಯೋಗ ಮಾಡಲು ಬಂದಿದ್ರಾ? ಎಂದು ನೋಡಬೇಕಾಗುತ್ತದೆ ಎಂದು ಟೀಕಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್

ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು - ಎಂ ಲಕ್ಷ್ಮಣ್ : ಸಂಸತ್​ನಲ್ಲಿ ಭದ್ರತಾ ಲೋಪ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಹಾಗೂ ಸಂಸದ ಪ್ರತಾಪ್ ಸಿಂಹನಿಗೂ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಮನೋರಂಜನ್​ಗೂ ಏನು ಸಂಬಂಧ? ಎಂಬ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಇಂದು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಸತ್​ನಲ್ಲಿ ಭದ್ರತಾ ಲೋಪದ ಬಗ್ಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು, ಇದಕ್ಕೆ ಸಂಸದರು ಉತ್ತರ ನೀಡಬೇಕು ಎಂದು ಹೇಳಿದರು. ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಮೈಸೂರಿನ ಮನೋರಂಜನ್ ಪ್ರತಾಪ್ ಸಿಂಹ ಅವರ ನಿಕಟ ಸಂಪರ್ಕದಲ್ಲಿರುವ ವ್ಯಕ್ತಿ. ಈತನಿಗೆ ಹಾಗೂ ಸಾಗರ್ ಶರ್ಮಾನಿಗೆ ಸ್ವತಃ ಪ್ರತಾಪ್ ಸಿಂಹ ಸಹಿ ಮಾಡಿ ಪಾಸ್ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು. ಬಿಜೆಪಿಯವರು ಈ ಘಟನೆಯನ್ನು ಲಘುವಾಗಿ ಪರಿಗಣಿಸಿದ್ದಾರೆ. ಯಾರು ಸಹ ಈ ಬಗ್ಗೆ ಮಾತನಾಡುತ್ತಿಲ್ಲ. ಸ್ವತಃ ಸಂಸತ್ ಸದಸ್ಯ ಪ್ರತಾಪ್ ಸಿಂಹ ಈ ಘಟನೆ ಆಗಿ 24 ಗಂಟೆ ಕಳೆದರೂ ಯಾವುದೇ ಮಾಹಿತಿ ನೀಡಿಲ್ಲ. ಈ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಲಕ್ಷ್ಮಣ್ ಆರೋಪಿಸಿದರು.

ಸ್ಮೋಕ್ ಡಬ್ಬಿ ಸಂಸತ್ ಒಳಗೆ ಹೋಗಿದ್ದು ಹೇಗೆ? : ಹೊಸ ಸಂಸತ್​ನಲ್ಲಿ ನಾಲ್ಕು ಹಂತದ ಭದ್ರತೆ ಇರುತ್ತದೆ. ಇಂತಹ ಭದ್ರತೆ ನಡುವೆಯೂ ಒಳಗೆ ಸ್ಮೋಕ್ ಡಬ್ಬಿ ಹೋಗಿದ್ದು ಹೇಗೆ?. ಇದೊಂದು ಪೂರ್ವ ನಿಯೋಜಿತ ಕೃತ್ಯವೇ ಹಾಗೂ ಬಂಧಿತ ಮನೋರಂಜನ್ ಪ್ರತಾಪ್ ಸಿಂಹ ಐಟಿ ಸೆಲ್​ನಲ್ಲಿ ಕೆಲಸ ಮಾಡುತ್ತಿದ್ದದ್ದು ನಿಜವೆ? ಎಂಬ 10 ಪ್ರಶ್ನೆಗಳಿಗೆ ಸಂಸದ ಪ್ರತಾಪ್ ಸಿಂಹ ಉತ್ತರ ನೀಡಬೇಕು ಹಾಗೂ ಸಂಸತ್ ಸ್ಥಾನದಿಂದ ಪ್ರತಾಪ್ ಸಿಂಹ ಅವರನ್ನು ಅಮಾನತುಗೊಳಿಸಬೇಕು‌‌ ಹಾಗೂ ಮೈಸೂರಿನ ಸಂಸದರ ಕಚೇರಿ ಸೀಜ್ ಮಾಡಬೇಕು ಎಂದು ಆಗ್ರಹಿಸಿದರು.

ನ್ಯಾಯಾಧೀಶರಿಂದ ತನಿಖೆಯಾಗಬೇಕು : ಸಂಸತ್​ನ ಭದ್ರತಾ ಲೋಪ ಪ್ರಕರಣ ಸಿಬಿಐನಿಂದ ತನಿಖೆ ಮಾಡಬಾರದು. ಏನಿದ್ದರೂ ಸುಪ್ರೀಂ ಕೋರ್ಟ್​ನ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಸಿಕ್ಕಿಬಿದ್ದ ಮನೋರಂಜನ್ ಹಾಗೂ ಸಾಗರ ಶರ್ಮ ಜೊತೆ ಪ್ರತಾಪ್ ಸಿಂಹನಿಗೆ ಏನು ಸಂಬಂಧ? ಎಂಬ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ :"ಪ್ರತಾಪಸಿಂಹ ಹಠಾವೋ, ಮೈಸೂರು ಬಚಾವೊ ಚಳವಳಿ ಮಾಡಬೇಕಾಗುತ್ತೆ": ಬಿಜೆಪಿಯ ಗಿರಿಧರ್​ ಕಿಡಿ

Last Updated : Dec 14, 2023, 7:16 PM IST

ABOUT THE AUTHOR

...view details