ಮೈಸೂರು: ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಅಧ್ಯಯನ ಪೀಠ ಸ್ಥಾಪಿಸಲು ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ದೊರಕಿದೆ.
ಮೈಸೂರು ವಿವಿಯಲ್ಲಿ ಎಸ್ಪಿಬಿ ಸಂಗೀತ ಅಧ್ಯಯನ ಪೀಠ ಸ್ಥಾಪಿಸಲು ಸಿಂಡಿಕೇಟ್ ಸಭೆ ಒಪ್ಪಿಗೆ
ದಿವಂಗತ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೀವನ, ಸಾಧನೆಯನ್ನು ಕಲಾರಸಿಕರ ಮನಸ್ಸುಗಳಿಗೆ ತಲುಪಿಸಲು ಮೈಸೂರು ವಿಶ್ವವಿದ್ಯಾನಿಲಯ "ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ” ಸ್ಥಾಪಿಸಲು ನಿರ್ಧರಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ನಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದು, ಖ್ಯಾತ ಹಿನ್ನೆಲೆ ಗಾಯಕ, ಕಲಾವಿದ ದಿವಂಗತ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೀವನ, ಸಾಧನೆಯನ್ನು ಕಲಾರಸಿಕರ ಮನಸ್ಸುಗಳಿಗೆ ತಲುಪಿಸಲು ಮತ್ತು ಅವರ ಸಾಧನೆಯನ್ನು ವಿವಿಧ ರೂಪಗಳಲ್ಲಿ ದಾಖಲಿಸಿ ಮುಂದಿನ ತಲೆಮಾರಿಗೆ ತಲುಪಿಸಲು ಮೈಸೂರು ವಿಶ್ವವಿದ್ಯಾನಿಲಯ "ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ” ಸ್ಥಾಪಿಸಲು ನಿರ್ಧರಿಸಿದ್ದು, ವಾರ್ಷಿಕ 5 ಲಕ್ಷ ರೂಪಾಯಿ ಅನುದಾನ ನೀಡುವ ಕುರಿತು ತೀರ್ಮಾನಿಸಲಾಗಿದೆ.
ಈ ಮೊತ್ತದಲ್ಲಿ ವಿಶೇಷ ಉಪನ್ಯಾಸ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆ ಮುಂತಾದ ಶೈಕ್ಷಣಿಕ ಕಾರ್ಯಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಎಲ್ಲವನ್ನು ನಿರ್ವಹಿಸಲು ಕ್ಷೇತ್ರ ತಜ್ಞರಾದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.