ಮೈಸೂರು/ಬೆಂಗಳೂರು: ತೀವ್ರ ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಣ್ಣಿರಿಟ್ಟು ಬಿಕ್ಕಿ ಬಿಕ್ಕಿ ಅತ್ತರು. ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆಯಲು, ಅವರ ಮನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಸಂಸದ ಡಿ.ಕೆ.ಸುರೇಶ್ ಮೈಸೂರಿನಲ್ಲಿ ಧ್ರುನಾರಯಣ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕಣ್ಣೀರು ಹಾಕಿದ ಡಿ.ಕೆ.ಶಿವಕುಮಾರ್:ಧ್ರುವನಾರಾಯಣ್ ಪಾರ್ಥಿವ ಶರೀರ ಅವರ ಮನೆಯಿಂದ ಕಾಂಗ್ರೆಸ್ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸುವ ಮುನ್ನ, ಮನೆ ಬಳಿ ಸಂಸದ ಡಿ ಕೆ. ಸುರೇಶ್, ಧ್ರುವನಾರಾಯಣ ಅವರ ಪಾರ್ಥಿವ ಶರೀರದ ಮುಂದೆ ಕಂಬನಿ ಹಾಕಿದರೆ, ಇತ್ತ ಪಾರ್ಥಿವ ಶರೀರ ಮೈಸೂರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ವೇಳೆ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೃವನಾರಾಯಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ತಮಗೆ ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿಭಾಯಿಸಿ ಪಕ್ಷಕ್ಕೆ ನಿಷ್ಠೆ ಮೆರೆದಿದ್ದರು. ಅಷ್ಟೇ ಏಕೆ ಅವರು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿ ಇದ್ದರು. ನಮ್ಮ ಕಾರ್ಯಾಧ್ಯಕ್ಷರಾಗಿ ಕೋವಿಡ್ ಸಮಯದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿ, ಅವರ ಬದ್ಧತೆ ಅವಿಸ್ಮರಣೀಯ ಎಂದು ಬಣ್ಣಿಸಿದರು.