ಮೈಸೂರು:ಬೆನ್ನು ಹತ್ತಿದ್ದ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಪೋಲಿಸ್ ಠಾಣೆಯೊಳಗೆ ಓಡೋಡಿ ಬಂದು ಆಶ್ರಯ ಪಡೆದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಗಾಯಗೊಂಡಿದ್ದ ಜಿಂಕೆಗೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಜಿಂಕೆಯೊಂದು ಪ್ರತ್ಯಕ್ಷವಾಗಿದೆ. ತಾಲೂಕಿನ ಜನರು ಜಿಂಕೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಜಿಂಕೆ ದಾರಿ ತಪ್ಪಿ ಬಂದು ನಗರದ ಹಲವು ಬಡಾವಣೆಗಳಲ್ಲಿ ಸುತ್ತಾಡಿದ್ದು, ಜನ ಮತ್ತು ವಾಹನ ಕಂಡು ವಿಚಲಿತವಾಗಿದ್ದು, ಇದೇ ವೇಳೆಯಲ್ಲಿ ನಗರದ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿವೆ.
ಬೆನ್ನು ಹತ್ತಿದ್ದ ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಪಕ್ಕದಲ್ಲಿರುವ ಪೋಲಿಸ್ ಠಾಣೆಯ ಮುಂದಿರುವ ಬ್ಯಾರಿಕೇಡ್ ಮೇಲೆ ಜಿಂಕೆ ಹಾರಿ, ಠಾಣೆಯೊಳಗೆ ನುಗ್ಗಿದೆ. ಅನಿರೀಕ್ಷಿತವಾಗಿ ಪ್ರತ್ಯಕ್ಷವಾದ ಜಿಂಕೆಯನ್ನು ನೋಡಿ ಪೊಲೀಸರು ಆಶ್ಚರ್ಯಗೊಂಡಿದ್ದಾರೆ. ಬೀದಿ ನಾಯಿಗಳು ಜಿಂಕೆಯ ಕತ್ತಿನ ಭಾಗ ಸೇರಿ ಮೂರ್ನಾಲ್ಕು ಕಡೆ ಕಚ್ಚಿವೆ. ಈ ವೇಳೆ ಪೊಲೀಸರು ಠಾಣೆಯ ಕೊಠಡಿಯಲ್ಲಿ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ರಕ್ತ ಸೋರುತ್ತಿದ್ದ ಜಾಗದಲ್ಲಿ ಅರಿಶಿಣದ ಪುಡಿಯನ್ನು ಹಚ್ಚಿದ್ದಾರೆ. ಇದರಿಂದ ರಕ್ತಸ್ರಾವ ಕಡಿಮೆಯಾಯಿತು.