ಪ್ರಕರಣದ ಬಗ್ಗೆ ಉಪ ಆಯುಕ್ತರ ಹೇಳಿಕೆ ಮೈಸೂರು:ಮದ್ಯಪ್ರಿಯರ ನೆಚ್ಚಿನ ಬಿಯರ್ ಬ್ರ್ಯಾಂಡ್‌ವೊಂದರಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ. ಹೀಗಾಗಿ, 25 ಕೋಟಿ ರೂಪಾಯಿ ಮೌಲ್ಯದ 78,678 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿರುವ ಮೈಸೂರು ಅಬಕಾರಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂಜನಗೂಡಿನಲ್ಲಿರುವ ಕಂಪನಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿದೆ. ಕಂಪನಿಯ ಸ್ಟ್ರಾಂಗ್ ಹಾಗೂ ಅಲ್ಟ್ರಾ ಲ್ಯಾಗರ್ ಈ ಅಂಶ ಗೋಚರಿಸಿದ್ದು, 7e ಮತ್ತು 7c ನಮೂನೆಯ (ದಿನಾಂಕ 15-07-23ರಂದು) ಬಾಟಲಿಂಗ್‌ನಲ್ಲಿರುವುದು ತಿಳಿದುಬಂದಿದೆ.
ಮಾಹಿತಿ ತಿಳಿದ ಕೂಡಲೇ ಬಿಯರ್ ಮಾದರಿಯನ್ನು ಕೆಮಿಕಲ್ ಲ್ಯಾಬ್ಗೆ ಕಳುಹಿಸಲಾಗಿತ್ತು. ಈ ಕುರಿತು (2-08-2023ರಂದು) ಕೆಮಿಕಲ್ ವರದಿ ಬಂದಿದ್ದು 'ಅನ್‌ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್' ಎಂದು ತಿಳಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಅಷ್ಟೊತ್ತಿಗೆ ಎಲ್ಲ ಬಾಕ್ಸ್ಗಳನ್ನೂ ತಡೆಹಿಡಿಯಲಾಗಿದೆ. ಕೆಲವು ಡಿಪೋದಿಂದ ಅಂಗಡಿಗಳಿಗೂ ವಿತರಣೆಯಾಗಿತ್ತು. ರಿಟೈಲ್‌ನಲ್ಲೂ ಮಾರಾಟವಾಗದಂತೆ ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಕಂಪನಿಯ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಅಬಕಾರಿ ಇಲಾಖೆ ಉಪ ಆಯುಕ್ತ ಎ.ರವಿಶಂಕರ್ ಪ್ರತಿಕ್ರಿಯೆ:"ಇಲ್ಲಿಯ ಅಬಕಾರಿ ಅಧೀಕ್ಷಕರು ದಿನಾಂಕ ಜು.28ರಂದು ನಂಜನಗೂಡಿನ ಯುನೈಟೆಡ್ ಬ್ರಿವರೀಸ್ ಘಟಕಕ್ಕೆ ಪತ್ರ ಬರೆದಿದ್ದರು. ಬ್ಯಾಚ್ ಸಂಖ್ಯೆ 7ಇ- ರಲ್ಲಿನ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಮತ್ತು ಅಲ್ಟ್ರಾ ಬಿಯರ್‌ನಲ್ಲಿ ಸೆಡಿಮೆಂಟ್ಸ್ ಕಂಡುಬಂದ ಕಾರಣ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗಿದ್ದು, ವರದಿ ಬರುವವರೆಗೂ ಈ ಬ್ರಿವರಿಯಿಂದ ಬಿಯರ್ ಸರಬರಾಜು ಮಾಡದಂತೆ ತಿಳಿಸಿದ್ದರು".
"ಅದರಂತೆ ನಾವು ಜಿಲ್ಲೆಯ ಎಲ್ಲಾ ಅಬಕಾರಿ ಇಲಾಖೆಯವರಿಗೆ ಪತ್ರ ಬರೆದು ಈ ಬ್ಯಾಚ್ನಲ್ಲಿರುವ ಬಿಯರ್ ತಡೆಹಿಡಿಯಲು ಸೂಚಿಸಿದ್ದೆವು. ಕೆಮಿಕಲ್ ಅನಾಲಿಸಿಸ್ ರಿಪೋರ್ಟ್ ಬಂದ ನಂತರ ಅದರಲ್ಲಿ ಇದು ಮಾನವ ಸೇವನೆಗೆ ಅರ್ಹವಲ್ಲ ಎಂದು ತಿಳಿದು ಬಂದಿತ್ತು. ಹಾಗಾಗಿ ಮತ್ತೊಮ್ಮೆ ಎಲ್ಲಾ ಅಬಕಾರಿ ಅಧೀಕ್ಷಕರಿಗೆ ಪತ್ರ ಬರೆದು, ತಮ್ಮ ವ್ಯಾಪ್ತಿಯಲ್ಲಿ ಇರುವ ವಿವಿಧ ಡಿಪೋಗಳಲ್ಲಿ ಮತ್ತು ಲೈಸನ್ಸ್ ಹೊಂದಿರುವ ರಿಟೇಲ್ ಅಂಗಡಿಗಳಲ್ಲಿಯೂ ಕೂಡ ಇವುಗಳು ಮಾರಾಟವಾಗದಂತೆ ತಡೆಹಿಡಿಯಲು ಹೇಳಲಾಗಿತ್ತು".
"ಈ ಬ್ಯಾಚ್ನಲ್ಲಿ ಸುಮಾರು 74,675 ಬಾಕ್ಸ್ಗಳಷ್ಟು ಬಿಯರ್ ಉತ್ಪಾದನೆ ಆಗಿದ್ದು, ಈ ಪೈಕಿ 45,520 ಬಾಕ್ಸ್ ಬಿಯರ್ ವಿವಿಧ ಡಿಪೋಗಳಿಗೆ ರವಾನೆಯಾಗಿತ್ತು. ಹಾಗೆಯೇ ಉತ್ಪಾದನಾ ಘಟಕದಲ್ಲಿ 29,155 ಬಾಕ್ಸ್ಗಳಷ್ಟು ದಾಸ್ತಾನಿಡಲಾಗಿತ್ತು. ಇದೀಗ ಈ ಎಲ್ಲಾ ದಾಸ್ತಾನುಗಳನ್ನು ಮಾರಾಟವಾಗದಂತೆ ತಡೆಹಿಡಿಯಲಾಗಿದೆ. ಬ್ರಿವರಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅವರು ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ರವಿಶಂಕರ್ ತಿಳಿಸಿದರು.
ಇದನ್ನೂ ಓದಿ:ನಕಲಿ ಮದ್ಯ ಮಾರಾಟ ಜಾಲ ಪತ್ತೆ: 4 ಲಕ್ಷ ಮೌಲ್ಯದ ಮದ್ಯ ಜಪ್ತಿ, ಇಬ್ಬರ ಬಂಧನ