ಮೈಸೂರು: ಶಾಲೆಗೆ ಹೋಗುವಾಗ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ವರ್ತನೆಯಿಂದ ಬೇಸತ್ತು, ಮನೆಯವರು ಶಾಲೆಯನ್ನು ಬಿಡಿಸಿದಾಗ ಮನನೊಂದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ವಿದ್ಯಾರ್ಥಿನಿಯ ತಂದೆ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ: ಮೃತ ವಿದ್ಯಾರ್ಥಿನಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗ್ರಾಮದಿಂದ ಶಾಲೆಗೆ ಬರುವಾಗ ಅದೇ ಗ್ರಾಮದ ಶರತ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಈ ವಿಚಾರವನ್ನು ವಿದ್ಯಾರ್ಥಿನಿಯು ತಂದೆಗೆ ಹೇಳಿದಾಗ ಅವರು ಯುವಕನನ್ನು ಕರೆದು ಬುದ್ದಿವಾದ ಹೇಳಿದ್ದರಂತೆ.
ಆದರೂ ಯುವಕ ಶರತ್ ತನ್ನ ವರ್ತನೆಯನ್ನು ಮುಂದುವರೆಸಿದಾಗ, ವಿದ್ಯಾರ್ಥಿನಿಯ ಮನೆಯವರು ಆಕೆಯನ್ನು ಶಾಲೆ ಬಿಡಿಸಿ ಮನೆಯಲ್ಲೇ ಉಳಿಸಿಕೊಂಡಿದ್ದರಂತೆ. ಯುವಕನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಯಿತು ಎಂದು ಮನನೊಂದ ಆಕೆ ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಈ ಸಂಬಂಧ ವಿದ್ಯಾರ್ಥಿನಿಯ ತಂದೆ "ನನ್ನ ಮಗಳ ಆತ್ಮಹತ್ಯೆಗೆ ಶರತ್ ಎಂಬ ಯುವಕನ ಕಿರುಕುಳವೇ ಕಾರಣ ಎಂದು ನಂಜನಗೂಡು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಬೈಕ್ಗೆ ಬೊಲೆರೋ ಡಿಕ್ಕಿ- ದಂಪತಿ ಸಾವು: ಸಂಬಂಧಿಕರ ಮನೆಯ ಶುಭ ಕಾರ್ಯಕ್ಕೆ ಬಂದು ಕಾರ್ಯ ಮುಗಿಸಿಕೊಂಡು ವಾಪಸ್ ಸ್ವಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಬೆಟ್ಟದಪುರ-ಕೆಆರ್ ನಗರ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮುಂಜುನಾಥ್ ಹಾಗೂ ಸುನಿತಾ ಎಂದು ಗುರುತಿಸಲಾಗಿದೆ.
ಬೆಟ್ಟದ ಪುರ ಸಮೀಪದ ಕೊಟ್ಟುವಳ್ಳಿ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಯ ಶುಭಕಾರ್ಯಕ್ಕೆ, ಕುಶಾಲನಗರದ ತೊರೆನೂರು ಗ್ರಾಮದ ಮಂಜುನಾಥ್ ಹಾಗೂ ಸುನಿತಾ ದಂಪತಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಬೈಕ್ನಲ್ಲಿ ಹೊರಟಿದ್ದಾಗ ಕೋಳಿ ತುಂಬಿಕೊಂಡು ಬರುತ್ತಿದ್ದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮಂಜುನಾಥ್ ಸಾವನ್ನಪ್ಪಿದ್ದಾರೆ. ಮೈಸೂರು ಆಸ್ಪತ್ರೆಗೆ ಸಾಗಿಸುವಾಗ ಪತ್ನಿ ಸುನಿತಾ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಬೊಲೊರೋ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:Student suicide: ನೀಟ್ ಪರೀಕ್ಷೆಯಲ್ಲಿ 2ನೇ ಬಾರಿಗೆ ಫೇಲ್; ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ