ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭೆಯ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ನಾಮನಿರ್ದೇಶನಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಇಂದು ಮೈಸೂರಿನ ಕಲಾಮಂದಿರದಲ್ಲಿ ರಾಜ್ಯ ಸರ್ಕಾರದ ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ನಾನು ಸಹ ಟಿಕೆಟ್ ಆಕಾಂಕ್ಷಿಯಾಗಿರುವೆ. ಈ ಬಗ್ಗೆ ಟಿಕೆಟ್ ಕೇಳೋಣ ಎಂದುಕೊಂಡಿದ್ದೇನೆ. ಮುಂದೆ ಏನಾಗುತ್ತದೋ ನೋಡೋಣ. ಯತೀಂದ್ರ ಸಿದ್ದರಾಮಯ್ಯನವರ ಹೆಸರು ಸಹ ಪ್ರಸ್ತಾವನೆಯಾಗಿದೆ. ಅದು ಒಳ್ಳೆಯದೇ. ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಕಾದು ನೋಡೋಣ. ಡಿ ಕೆ ಶಿವಕುಮಾರ್ ನಾನು ಒಳ್ಳೆಯ ಸ್ನೇಹಿತರು, ಈಗ ಅವರು ರಾಜ್ಯದ ಡಿಸಿಎಂ ಆಗಿದ್ದಾರೆ. ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು ಎಂದು ಎಚ್. ವಿಶ್ವನಾಥ್ ಪ್ರಶ್ನೆ ಮಾಡಿದರು.
ಹೆಚ್‌ಡಿಕೆ ಬೊಮ್ಮಾಯಿ ಇಬ್ಬರೇ ಸತ್ಯಹರಿಶ್ಚಂದ್ರರು: ಸತ್ಯ ಹರಿಶ್ಚಂದ್ರ ಸತ್ತ ಮೇಲೆ ರಾಜ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರೇ ಸತ್ಯ ಹರಿಶ್ಚಂದ್ರರು ಇರೋದು ಎಂದು ವ್ಯಂಗ್ಯವಾಡಿದ ಎಚ್ ವಿಶ್ವನಾಥ್, ಈ ಇಬ್ಬರು ಮುಖ್ಯಮಂತ್ರಿಗಳಾಗಿದ್ದವರು. ಇವರು ಮಾಡಿದ ಅನಾಹುತಗಳನ್ನು ಜನರು ಈಗಲೂ ಅನುಭವಿಸುತ್ತಿದ್ದಾರೆ. ಕುಮಾರಸ್ವಾಮಿ ಪೆನ್ ಡ್ರೈವ್ ಕಥೆ ಏನಾಯಿತು. ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅದನ್ನು ಸಾಬೀತು ಮಾಡಲಿ. ನೀವು ಮುಖ್ಯಮಂತ್ರಿಗಳಾಗಿದ್ದವರು. ಈ ರೀತಿ ಮಾತನಾಡುವುದರಿಂದ ನಿಮ್ಮ ಘನತೆ ಕಡಿಮೆ ಆಗುತ್ತದೆ ಎಂದು ವಿಶ್ವನಾಥ್ ಅವರು, ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ದಲಿತರಿಗೆ ಏನು ಮಾಡಿದೆ?ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಪಿ-ಟಿಎಸ್ಪಿ ಹಣ ಬಳಕೆಯನ್ನು ಮಾಡಿರುವ ಕ್ರಮ ಸರಿಯಿದೆ. ಅಗತ್ಯತೆ ಇರುವ ಕಡೆ ಅನುದಾನ ಬಳಸಲು ಸರ್ಕಾರಕ್ಕೆ ಅಧಿಕಾರ ಇದೆ. ಇದನ್ನೇ ಬಿಜೆಪಿ, ಜೆಡಿಎಸ್ ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗ ದಲಿತರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ವಿಶ್ವನಾಥ್, ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ಗೆ 12 ಸಚಿವ ಸ್ಥಾನ ಸಿಕ್ಕಿತ್ತು. ಅದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಎರಡು ಸ್ಥಾನ ಖಾಲಿ ಇದ್ದರು, ದಲಿತರಿಗೆ ಹಾಗೂ ಮುಸ್ಲಿಮರಿಗೆ ಕೊಡಬೇಕೆಂದರೂ ಕೊಡಲಿಲ್ಲ. ಇಂತಹ ಜೆಡಿಎಸ್ ಹಾಗೂ ಬಿಜೆಪಿಯವರು ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಇದನ್ನೂಓದಿ:ಅಣ್ಣನ ವಿಚಾರ ತಮ್ಮನಿಗೂ ಗೊತ್ತು.. ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ