ಮೈಸೂರು: ಕೊರೊನಾ ಆರ್ಭಟದ ಹಿನ್ನೆಲೆ ವಾರದಲ್ಲಿ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುವ ಮೂಲಕ ಕಠಿಣ ಲಾಕ್ಡೌನ್ಗೆ ಜಿಲ್ಲಾಡಳಿತ ಮುಂದಾಗಿದೆ.
ಮೇ 29ರಿಂದ ಜೂನ್ 7ರವರೆಗೆ ಮೈಸೂರಿನಲ್ಲಿ ಸೋಮವಾರ ಹಾಗೂ ಗುರುವಾರ ಮಾತ್ರ ಬೆಳಗ್ಗೆ 6ರಿಂದ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಬೆಳಗ್ಗೆ 8ರಿಂದ 12ರವರೆಗೆ ಬ್ಯಾಂಕ್ಗಳು ಹಾಗೂ ವಿಮೆ ಕಂಪನಿಗಳು ತೆರೆಯಲು ಅವಕಾಶ ನೀಡಲಾಗಿದೆ.
ಹಾಲು, ಮೊಸರು ಖರೀದಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ದಿನಸಿ ವಸ್ತುಗಳ ಖರೀದಿಗೆ ವಾರದಲ್ಲಿ ಎರಡು ದಿನಗಳು ಮಾತ್ರ ಅವಕಾಶ ಇರಲಿದೆ. ಅಂಗಡಿಗಳ ಮುಂದೆ ಗುಂಪು ಸೇರದಂತೆ ಮತ್ತು ಮುಗಿಬೀಳದಂತೆ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಎಸ್.ಟಿ.ಸೋಮಶೇಖರ್ ಮನವಿ:
ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಸೋಂಕು ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಸಹ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಹಶೀಲ್ದಾರ್ಗಳು, ಜಿಲ್ಲಾ ಹಾಗೂ ತಾಲೂಕುಗಳ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜತೆಗೆ ಸಾರ್ವಜನಿಕರಿಗೂ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಸೋಮವಾರ ಹಾಗೂ ಗುರುವಾರ ಎರಡು ದಿನ ಕೆಲವು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಹಾಲು, ಮೊಸರು ಪ್ರತಿ ದಿನ ಲಭ್ಯವಾಗಲಿದ್ದು, ಖರೀದಿ ಪ್ರಕ್ರಿಯೆಗೆ ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ:ಸಚಿವ ಸಂಪುಟ ಸಭೆ ಆರಂಭ; ನಾಯಕತ್ವ ಬದಲಾವಣೆ ಪ್ರಸ್ತಾಪ ಸಾಧ್ಯತೆ
ವಾರದಲ್ಲಿ 2 ದಿನ ಅಗತ್ಯ ವಸ್ತುಗಳಿಗೆ ಅವಕಾಶ ನೀಡಿದ್ದನ್ನು ಜನತೆ ಸದುಪಯೋಗ ಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಯಾರೂ ಆತಂಕ ಪಡದೆ ಸಮಾಧಾನದಿಂದ ವಸ್ತುಗಳನ್ನು ಖರೀದಿಸಬೇಕು. ಅಂದರೆ ಅಂಗಡಿಗಳ ಮುಂದೆ ಗುಂಪು ಸೇರುವುದು, ಮುಗಿಬೀಳುವಂತಹ ಕೆಲಸ ಮಾಡಬಾರದು. ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮೈಸೂರಿನ ಜನತೆಯಲ್ಲಿ ಪ್ರಾರ್ಥಿಸುವುದಾಗಿ ಸಚಿವ ಸೋಮಶೇಖರ್ ಮನವಿ ಮಾಡಿದ್ದಾರೆ.