ಮೈಸೂರು: ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಪತ್ನಿಗೆ ಕೈಕೊಟ್ಟು ಮತ್ತೊಂದು ಹುಡುಗಿಯನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ನಗರದ ಲಷ್ಕರ್ ಠಾಣಾ ಕಾನ್ಸ್ಟೇಬಲ್ ಸಮೀವುಲ್ಲಾ ವಿರುದ್ಧ ಪತ್ನಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಈತ ಮದುವೆಯಾದ ನಾಲ್ಕು ವರ್ಷಕ್ಕೆ ಪತ್ನಿಗೆ ಕೈಕೊಟ್ಟು, ಎರಡನೇ ಮದುವೆಯಾಗಿದ್ದಾನೆ ಎನ್ನಲಾಗ್ತಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2017 ರಲ್ಲಿ ಹೆಚ್.ಡಿ ಕೋಟೆಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕಿಯನ್ನು ಮದುವೆಯಾಗಿದ್ದ ಕಾನ್ಸ್ಟೇಬಲ್ ಸಮೀವುಲ್ಲಾ, ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಬೈಕ್ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದ. ಒಂದೆರಡು ತಿಂಗಳು ಪತ್ನಿಯೊಂದಿಗೆ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದ ಸಮೀವುಲ್ಲಾ, ದಿನ ಕಳೆದಂತೆ ಕ್ಷುಲ್ಲಕ ಕಾರಣಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಒಂದು ವರ್ಷದ ನಂತರ ಮಕ್ಕಳಾಗಿಲ್ಲವೆಂದು ಕ್ಯಾತೆ ತೆಗೆದಿದ್ದ. ಮಕ್ಕಳಿಲ್ಲವೆಂದು ಗಂಡ ಸಮೀವುಲ್ಲಾ ಹಾಗೂ ಮನೆಯವರು ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಆಕೆಯ ಬಳಿಯಿದ್ದ ಚಿನ್ನಾಭರಣ ಕಸಿದುಕೊಂಡಿದ್ದ. ಇತ್ತೀಚೆಗೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ ಸಮೀವುಲ್ಲಾ, ಇನ್ನೊಂದು ಹುಡುಗಿ ಜೊತೆ ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಅತ್ಯಾಚಾರದಿಂದ ಬದುಕುಳಿದ ಸಂತ್ರಸ್ತೆ ಮೇಲೆ ಬೆಂಕಿ ಹಚ್ಚಿದ ದುಷ್ಕರ್ಮಿ
ವಂಚನೆಗೊಳಗಾದ ಮಹಿಳೆ, ಪತಿ ಸಮೀವುಲ್ಲಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ. ಈ ನಡುವೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿ ಮೂರು ದಿನ ಕಳೆದರೂ, ಆರೋಪಿ ಸಮೀವುಲ್ಲಾನ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಮೀವುಲ್ಲಾನ ಪತ್ನಿ ಅಳಲು ತೋಡಿಕೊಂಡಿದ್ದಾಳೆ.