ಮೈಸೂರು: "ಊಹಾಪೋಹದ ಸುದ್ದಿ ಮಾಡುವುದೇ ವೃತ್ತಿಪರತೆಯೇ?. ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ. ಪ್ರಸ್ತುತ ಪ್ರತಿಕಾ ರಂಗ ತನ್ನ ಜವಾಬ್ದಾರಿಯನ್ನು ಮರೆತಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ಇಂದು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, "ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೆ ಹೋದರೆ, ಅವರನ್ನೂ ನೀವು ಗೌರವದಿಂದ ನಡೆಸಿಕೊಂಡರೆ ನಿಮ್ಮನ್ನು ಸಮಾಜದ ನಾಲ್ಕನೇ ಅಂಗ ಅಂತ ಕರೆಯೋಕೆ ಆಗುತ್ತಾ?. ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ ಸಮಾಜಮುಖಿಯಾಗಿರುತ್ತದೆ"ಎಂದು ಹೇಳಿದರು.
"ಅಸಮಾನತೆ ಯಾಕಿನ್ನೂ ಸಮಾಜದಲ್ಲಿದೆ, ಸಂವಿಧಾನದ ವಿರುದ್ಧ ಮಾತಾಡುವವರೂ ಇದ್ದಾರೆ. ಇಂಥವರಿಂದ ಸಮಾಜಕ್ಕೆ ಆಗುವ ಹಾನಿಯನ್ನು ಪತ್ರಕರ್ತರು ವಿಶ್ಲೇಷಿಸಿ ಬರೆಯಬೇಕು. ಇವತ್ತು ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿಪರತೆ ಇಲ್ಲವಾಗಿ ವ್ಯಾಪಾರ ಹೆಚ್ಚಾಗಿರುವುದು ಅನಾರೋಗ್ಯಕಾರಿ ಬೆಳವಣಿಗೆ. ಸಣ್ಣ ಪತ್ರಿಕೆಗಳ ತವರೂರು ಮೈಸೂರು ಪತ್ರಿಕಾ ವೃತ್ತಿ ಪರತೆಗೆ ಹೆಸರಾಗಿತ್ತು. ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ, ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿದ್ದೇ ಕಾರಣ. ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಸಮಾಜಕ್ಕೇನು ನಷ್ಟ" ಎಂದು ಪ್ರಶ್ನಿಸಿದರು.
"ಗಂಡ-ಹೆಂಡತಿ ಜಗಳ ಸುದ್ದಿ ಮಾಡ್ತೀರಲ್ಲಾ ಅದರಿಂದ ಸಮಾಜಕ್ಕೆ ಏನು ಪ್ರಯೋಜನ?. ಇಂಥದ್ದನ್ನೆಲ್ಲಾ ಸ್ಟೋರಿ ಮಾಡಿದರೆ ಮಾಧ್ಯಮಗಳ ಬಗ್ಗೆ ಜನ ಕುತೂಹಲ ಕಳೆದುಕೊಳ್ಳದೆ ಇನ್ನೇನಾಗುತ್ತದೆ?. ನಾನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿದ್ದೇನೆ. ನನ್ನ ವಿರುದ್ಧ ಯಾರೇ ಸುದ್ದಿ ಬರೆದರೂ ಯಾಕೆ ಈ ರೀತಿ ಬರೆದಿದ್ದೀರಾ ಎಂದು ಕೇಳುವುದಿಲ್ಲ. ನಾನು ಯಾವುದೇ ಟಿವಿ ಚಾನೆಲ್ ಮತ್ತು ಪತ್ರಿಕೆಗಳಿಗೆ ಫೋನ್ ಮಾಡಿದ ನಿದರ್ಶನ ಇಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ವಾಕ್ ಮತ್ತು ಅಭಿವ್ಯಕ್ತಿ ಇರಬೇಕು. ಆದ್ದರಿಂದ ಇದನ್ನು ಬಂದ್ ಮಾಡುವಂಥದ್ದಲ್ಲ" ಎಂದು ಹೇಳಿದರು.