ಮೈಸೂರು:ವಿದ್ಯಾರ್ಥಿ ದಿನಗಳಲ್ಲಿ ಚಲನಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದುದಾಗಿ ನೆನಪಿಸಿಕೊಂಡ ಸಿಎಂ ಸಿದ್ದರಾಮಯ್ಯ, ವಾರಕ್ಕೆ ಆರು ಚಲನಚಿತ್ರ ವೀಕ್ಷಿಸುತ್ತಿದ್ದೆ. ಆದರೆ ಈಗ ಸಮಯ ಸಿಗುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಕಲಾಮಂದಿರದಲ್ಲಿ ಕುಳಿತಿದ್ದವರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.
ನಗರದ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಇಂದು ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಿರುವ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ದಸರಾ ಚಲನಚಿತ್ರೋತ್ಸವದಲ್ಲಿ ಅನೇಕ ಪ್ರಶಸ್ತಿ ಪಡೆದ ಸದಭಿರುಚಿಯ ಚಲನಚಿತ್ರಗಳ ಪ್ರದರ್ಶನವಾಗುತ್ತಿದ್ದು, ಸಿನಿಮಾಪ್ರಿಯರು ಸದಾವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ತಮ್ಮ ಸರ್ಕಾರ ಗುಣಮಟ್ಟದ ಚಲನಚಿತ್ರ ನಿರ್ಮಾಣಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದರು.
ಚಲನಚಿತ್ರ ಪ್ರಭಾವಶಾಲಿ ಮಾಧ್ಯಮ. ಜೀವನದ ಮೌಲ್ಯಗಳನ್ನು ನಾಡಿಗೆ ತಿಳಿಸುವ ಕೆಲಸ ಮಾಡುತ್ತದೆ. ಹೀಗಾಗಿ ತಮ್ಮ ಸರ್ಕಾರ ಚಲನಚಿತ್ರ ಕ್ಷೇತ್ರಕ್ಕೆ ಸಹಕಾರ ನೀಡುವುದನ್ನು ಮುಂದುವರಿಸಿದೆ. ಕನ್ನಡ ಚಿತ್ರರಂಗ ವಿಶ್ವದರ್ಜೆಯ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದೆ. ಬಹಳಷ್ಟು ಮಂದಿ ಓದಿಗಿಂತ ಚಲನಚಿತ್ರ ನೋಡಿಯೇ ಹೆಚ್ಚು ಪ್ರಭಾವಿತರಾಗುತ್ತಾರೆ. ಹೀಗಾಗಿ ಚಲನಚಿತ್ರಗಳು ನಾಡಿಗೆ ಅಗತ್ಯ. ಸಿನಿಮಾಗಳು ಬದುಕಿನ ಮೌಲ್ಯ ಒಳಗೊಂಡಿದ್ದರೆ ಸಮಾಜ, ನಾಡಿಗೆ ಹೆಚ್ಚು ಉಪಯುಕ್ತ. ಬಂದು ಹೋಗಿರುವ ಅನೇಕ ಉತ್ತಮ ಚಲನಚಿತ್ರಗಳು ಬಹಳಷ್ಟು ದಿನ ಪ್ರದರ್ಶನ ಕಂಡಿವೆ ಎಂದು ಹೇಳಿದರು.
ಇದೇ ವೇಳೆ, ಈ ವರ್ಷದ ದಸರಾ ಚಲನಚಿತ್ರೋತ್ಸವವನ್ನು ಜನ್ಮ ಶತಮಾನೋತ್ಸವ ಕಂಡಿರುವ ದಿವಂಗತ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಗೆ ಅರ್ಪಿಸಿರುವುದನ್ನು ಉಲ್ಲೇಖಿಸಿ, ಕನ್ನಡ ಚಲನಚಿತ್ರರಂಗ ಕಂಡ ಅತ್ಯಂತ ಅಪರೂಪದ ಹಾಸ್ಯನಟ ಅವರು. ಅಂದಿನ ದಿನಗಳಲ್ಲಿ ನರಸಿಂಹರಾಜು ಇಲ್ಲದಿದ್ದರೆ ಅದು ಸಿನಿಮಾ ಎನಿಸಿಕೊಳ್ಳುತ್ತಿರಲಿಲ್ಲ ಎಂದು ಸ್ಮರಿಸಿದರು.
ನರಸಿಂಹರಾಜು ಜನ್ಮದಿನದ ಪ್ರಯುಕ್ತ ಪುತ್ರಿ ಸುಧಾ ನರಸಿಂಹರಾಜು ಅವರಿಗೆ ಸನ್ಮಾನ ಮಾಡುವುದರ ಜೊತೆಗೆ ನರಸಿಂಹರಾಜು ಭಾವಚಿತ್ರಕ್ಕೆ ಸಿಎಂ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಚಲನಚಿತ್ರೋತ್ಸವದ ವಿಶೇಷ ಮಾಹಿತಿಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಚಿತ್ರನಟ ಡಾರ್ಲಿಂಗ್ ಕೃಷ್ಣ, ಮೈಸೂರಿನ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ನನ್ನ ಊರು ಮೈಸೂರು ಆದ ಕಾರಣ ನನ್ನ ಕಲೆಗೆ ಮೈಸೂರು ಅತ್ಯುತ್ತಮ ವೇದಿಕೆ ಮಾಡಿಕೊಟ್ಟಿತ್ತು. ನನಗಷ್ಟೇ ಅಲ್ಲದೆ ಹಲವು ಕಲೆಗಾರರಿಗೆ ಮೈಸೂರಿನ ದಸರಾ ಉಪಯುಕ್ತವಾಗಿದೆ. ಸಿನಿಮಾಗಳು ಕೇವಲ ಮನರಂಜನೆ ಅಷ್ಟೇ ಅಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿವೆ ಎಂದು ತಿಳಿಸಿದರು.