ಮೈಸೂರು: ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ 37ನೇ ತಂಡದ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳ ನಿರ್ಗಮಿತ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಅಕಾಡೆಮಿ ಪ್ರತಿಷ್ಠಿತ ತರಬೇತಿ ನೀಡುವ ಅಕಾಡೆಮಿಯಾಗಿದೆ. ತರಬೇತಿ ಸಂದರ್ಭದಲ್ಲಿ ದೈಹಿಕವಾಗಿ ಸದೃಡವಾಗುವ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಲಾಗುತ್ತದೆ. ತರಬೇತಿಯ ನಂತರ ನೀವು ಸಮಾಜ ಸೇವೆಗೆ ತೆರಳುತ್ತೀರಿ. ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರು ಸಮಾಜ ಸೇವಕರು. ನಾವು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜನರು ನಮ್ಮ ನಿಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ಕಾನೂನಿನ ಅಡಿಯಲ್ಲಿ ಜನರ ವಿಶ್ವಾಸ ಗಳಿಸಬೇಕು. ಪೊಲೀಸ್ ಇಲಾಖೆಯಲ್ಲಿ ಕ್ಲಿಷ್ಟ ಪರಿಸ್ಥಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೂ ತಾಳ್ಮೆ ಕಳೆದುಕೊಳ್ಳದೆ ಶಾಂತ ರೀತಿಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಲಾಬಿಗೆ ಒಳಗಾಗದೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಯುತವಾಗಿ ಬದುಕುವ ಹಕ್ಕು ಇರುತ್ತದೆ. ಇದಕ್ಕೆ ಧಕ್ಕೆ ಆಗಬಾರದು. ನಮ್ಮ ಸಮಾಜದಲ್ಲಿ ಹಲವು ಜಾತಿ, ಧರ್ಮದ ಜನರು ವಾಸಿಸುತ್ತಿದ್ದಾರೆ. ಯಾವ ವರ್ಗದವರೂ ಸಹ ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸದಂತೆ ನೋಡಿಕೊಳ್ಳಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.