ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ..ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಮೈಸೂರು: ಸಿದ್ದರಾಮಯ್ಯ ಅವರಿಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಕೊಟ್ಟ ಭರವಸೆ ಈಡೇರಿಸದೆ ಇದ್ದರೆ ರಾಜಕೀಯ ನಿವೃತ್ತಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸುತ್ತೂರು ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಅವರು ಸಾಧ್ಯವಾಗದ ಭರವಸೆ ನೀಡುತ್ತಿದ್ಧಾರೆ. ಅವರ ಆಡಳಿತದಲ್ಲಿ ವಿದ್ಯುತ್ ಇಲಾಖೆ ದುಸ್ಥಿತಿಯಲ್ಲಿತ್ತು. ನಮ್ಮ ಸರ್ಕಾರ ಬಂದ ಮೇಲೆ ಅದು ಸುಧಾರಿಸಿದೆ ಎಂದರು.
ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ: ನಾವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದವರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಟ್ಟ ಮೇಲೆ, ಅದೇ ರೀತಿ ಕಾಂಗ್ರೆಸ್ ನವರು ಅಸಾಧ್ಯವಾದ ಭರವಸೆ ಕೊಡುತ್ತಿದ್ದಾರೆ. ಜನಕ್ಕೆ ಇದೆಲ್ಲಾ ಅರ್ಥವಾಗುತ್ತದೆ. ಸಿದ್ದರಾಮಯ್ಯ ಇತ್ತೀಚೆಗೆ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಅದು ಎಷ್ಟು ಸರಿ ಅಂತಾ ಅವರೇ ಯೋಚನೆ ಮಾಡಲಿ. ಹಾಗಾಗಿ ನಾನು ಸಿದ್ದರಾಮಯ್ಯ ಅವರ ವೈಯಕ್ತಿಕ ಟೀಕೆಗಳಿಗೆ ಉತ್ತರಿಸಬಾರದು ಅಂದುಕೊಂಡಿದ್ದೇನೆ. ನಾವು ಕೂಡ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಟೀಕಿಸಿದ್ದೇವೆ. ಆದರೆ ವೈಯಕ್ತಿಕ ಟೀಕೆ ಮಾಡಿರಲಿಲ್ಲ ಎಂದು ಕುಟುಕಿದರು.
ಮೋದಿ ಹಿಟ್ಲರ್ ಎಂಬ ಸಿದ್ದರಾಮಯ್ಯ ಹೇಳಿಕೆಗೂ ತಿರುಗೇಟು ನೀಡಿದ ಸಿಎಂ, ಮೋದಿ ಅವರನ್ನು ಗುಜರಾತ್ ಚುನಾವಣೆ ವೇಳೆ ಬಾಯಿಗೆ ಬಂದ ರೀತಿ ಮಾತಾಡಿದ ಪರಿಣಾಮ ಅಲ್ಲಿನ ಫಲಿತಾಂಶ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗಲೂ ಅದೇ ಆಗುತ್ತದೆ ಎಂದರು.
ಹೆಚ್ಚಿನ ಗಸ್ತು ತಿರುಗುವಂತೆ ಸೂಚನೆ:ಚಿರತೆ ದಾಳಿ ವಿಚಾರವಾಗಿ ಮಾತನಾಡಿ, ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಚಿರತೆ ಸೇರಿದಂತೆ ವಿವಿಧ ಪ್ರಾಣಿಗಳಿಂದ ಮನುಷ್ಯರ ಜೀವಕ್ಕೆ ಹಾನಿಯಾಗುತ್ತಿದೆ. ಈ ಹಿನ್ನೆಲೆ ಕಾಡಂಚಿನ ಪ್ರದೇಶಗಳಲ್ಲಿ ಅರಣ್ಯ ಅಧಿಕಾರಿಗಳು ಹೆಚ್ಚಿನ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ. ಜತೆಗೆ ಚಿರತೆ ಮರಿ ಮಾಡುವ ಪ್ರದೇಶಗಳಲ್ಲಿ ಸಂಜೆ 6 ರ ವೇಳೆ ಜನರು ಓಡಾಡದಂತೆ ಸಲಹೆ ನೀಡಲಾಗಿದೆ. ಜನನಿಬೀಡ ಪ್ರದೇಶದಲ್ಲಿರುವ ಚಿರತೆಗಳನ್ನು ಹಿಡಿಯಲು ವಿಶೇಷ ತಂಡ ರೂಪಿಸಲಾಗಿದೆ. ಈಗಾಗಲೇ ಮೈಸೂರಿನಲ್ಲಿ ಹೆಚ್ಚು ಚಿರತೆ ದಾಳಿ ಆಗುತ್ತಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಪರಿಣಿತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಯಜಮಾನಿಗೆ ₹2 ಸಾವಿರ ಸಹಾಯಧನ, 10 ಕೆ.ಜಿ. ಅಕ್ಕಿಯನ್ನು ಕೊಡುವುದಾಗಿ ಭರವಸೆ ನೀಡಿದ್ದೇವೆ. ಅದನ್ನು ಈಡೇರಿಸುತ್ತೇವೆ. ಒಂದು ವೇಳೆ ಈಡೇರಿಸದೇ ಹೋದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇವೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿ: 75 ವರ್ಷ ದಾಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತುತ ನಾಯಕರಲ್ಲ. ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿ ಪಕ್ಷದ ಮಾರ್ಗದರ್ಶಕರಾಗಿರಬೇಕು ಎಂದು ಇತ್ತೀಚೆಗೆ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭ್ರಷ್ಟಾಚಾರದ ಕೂಪಮಂಡಲ್ಲಿರುವ ಪಕ್ಷದ ನಾಯಕ. ಭ್ರಷ್ಟಾಚಾರದಲ್ಲಿ ತೊಡಗಿರುವ ನಾಯಕರು ಅವರಾಗಿದ್ದು, ಅವರ ಸಾಧನೆಗಳು ಇಡೀ ಜಗತ್ತಿಗೆ ಗೊತ್ತಿದೆ. ಸಿದ್ದರಾಮಯ್ಯ ವಯಸ್ಸು ನಿವೃತ್ತಿ ದಾಟಿದೆ. ಅವರು ಈ ಕಾಲಕ್ಕೆ ಪ್ರಸ್ತುತವಲ್ಲ. ಅವರು ಪಕ್ಷಕ್ಕೆ ಮಾರ್ಗದರ್ಶಕರಾಗಿರಬೇಕು. ನಾನು ಇನ್ನೂ ಕಣದಲ್ಲಿದ್ದೇನೆ ಎನ್ನುವ ಮೂಲಕ ಸ್ವಾರ್ಥಿಯಾಗಬಾರದು. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು. ಆದರೆ ಅಂಥ ಯಾವ ಗುಣವೂ ಸಿದ್ದರಾಮಯ್ಯ ಅವರಿಗೆ ಇಲ್ಲ. ಕೇವಲ ನಾನು, ನಾನು, ನಾನು ಎನ್ನುವುದಷ್ಟೇ ಅವರಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ:75 ವರ್ಷ ದಾಟಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯಲಿ: ಅಶ್ವತ್ಥನಾರಾಯಣ